ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇವರು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿಕೊಂಡಿದ್ದಾರೆ. ತಲೆಗೆ ದೊಡ್ಡ ಪೆಟ್ಟಾದಂತೆ ಕಾಣುತ್ತಿದ್ದು ಬ್ಯಾಂಡೇಜ್ ಹಾಕಲಾಗಿದೆ. ಕೊಲಾಜ್ ರೂಪದ ಈ ಫೋಟೋದಲ್ಲಿ ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಅವರ ಚಿತ್ರಗಳು ಕೂಡ ಇದೆ. ಅನೇಕ ಬಳಕೆದಾರರು ಇದನ್ನು ಹಂಚಿಕೊಂಡು, ಅನಾರೋಗ್ಯಕ್ಕೆ ಒಳಗಾದ ರಶ್ಮಿಕಾ ಮಂದಣ್ಣ ಎಂದು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಜನವರಿ 30, 2025 ರಂದು ಈ ಫೋಟೋ ಅಪ್ಲೋಡ್ ಮಾಡಿ, ‘‘ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಏನಾಯಿತು. ಇವರನ್ನ ಹೀಗಂತೂ ನೋಡೊಕೆ ಆಗಲ್ಲ. ಇವರ ಸ್ಥಿತಿಗೆ ಕಾರಣ ಏನು’’ ಎಂದು ಬರೆದುಕೊಂಡಿದ್ದಾರೆ.
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಪೋಸ್ಟ್ನ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಇದು ಡಿಜಿಟಲ್ ಎಡಿಟೆಡ್ ಫೋಟೋ ಆಗಿದ್ದು, ನೈಜ್ಯ ಫೋಟೋದಲ್ಲಿ ಇರುವವರು ಬಿಬಿಸಿ ಟಿವಿ ನಿರೂಪಕಿ ನಿಕಿ ಚಾಪ್ಮನ್.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ನಲ್ಲಿ ರಶ್ಮಿಕಾ ಮಂದಣ್ಣ ಅವರ ಅನಾರೋಗ್ಯದ ಬಗ್ಗೆ ಸುದ್ದಿಗಳನ್ನು ಹುಡುಕಿದ್ದೇವೆ. ಆಗ ಅವರು ವಾಕರ್ ಸಹಾಯದಿಂದ ನಡೆಯುವ ವೀಡಿಯೊವನ್ನು ಹಂಚಿಕೊಳ್ಳುವ ಕೆಲವು ಲೇಖನಗಳು ನನಗೆ ಸಿಕ್ಕವು. ಇದರಲ್ಲಿರುವ ಮಾಹಿತಿಯ ಪ್ರಕಾರ, ರಶ್ಮಿಕಾ ಜಿಮ್ ಮಾಡುವಾಗ ಕಾಲಿಗೆ ಗಾಯ ಮಾಡಿಕೊಂಡರು.
ಇದೇವೇಳೆ ಝೂಮ್ ಟಿವಿ ಜನವರಿ 27, 2025 ರಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ ವೀಡಿಯೊದಲ್ಲಿ ರಶ್ಮಿಕಾ 'ಚಾವಾ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊದಲ್ಲಿ ನೀಡಿರುವ ವಿವರಣೆಯ ಪ್ರಕಾರ, ‘‘ರಶ್ಮಿಕಾ ಮಂದಣ್ಣ ಕಾಲಿನ ಗಾಯದ ನಡುವೆಯೂ ಕುಂಟುತ್ತಾ ಚಾವಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದರು. ರಶ್ಮಿಕಾ ಅವರ ಮೂಳೆ ಮುರಿದಿದೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’’ ಎಂದು ಝೂಮ್ ಬರೆದುಕೊಂಡಿದೆ.
ಹೀಗಾಗಿ ರಶ್ಮಿಕಾ ಮಂದಣ್ಣ ಅವರ ಕಾಲಿಗೆ ಗಾಯವಾಗಿದ್ದು ಅವರು ಆಸ್ಪತ್ರೆ ಸೇರುವ ಮಟ್ಟಕ್ಕೆ ಏನೂ ಆಗಿಲ್ಲ ಎಂಬುದನ್ನು ನಾವು ಕಂಡುಕೊಂಡೆವು. ಅಲ್ಲದೆ ವೈರಲ್ ಫೋಟೋದಲ್ಲಿ ಇರುವಂತೆ ರಶ್ಮಿಕಾ ಆಸ್ಪತ್ರೆಯಲ್ಲಿ ಇರುತ್ತಿದ್ದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ನಾವು ಅಂತಹ ಯಾವುದೇ ವಿಶ್ವಾಸರ್ಹ ಮಾಧ್ಯಮ ವರದಿಯನ್ನು ಕಂಡಿಲ್ಲ.
ಬಳಿಕ ನಾವು ವೈರಲ್ ಫೋಟೋದಲ್ಲಿರುವ ರಶ್ಮಿಕಾ ಅವರ ಪಾರ್ಟ್ ಅನ್ನು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದ್ದೇವೆ. ಆಗ ಇದೇ ವೈರಲ್ ಫೋಟೋಕ್ಕೆ ಹೋಲಿಕೆಯಾಗುವ ಸುದ್ದಿಯೊಂದನ್ನು ಯಾಹೂನಲ್ಲಿ ಕಂಡುಕೊಂಡಿದ್ದೇವೆ. 12 ಜನವರಿ 2025 ರಂದು ಪ್ರಕಟವಾದ ಲೇಖನದ ಪ್ರಕಾರ, ‘‘ಮೆದುಳಿನ ಗೆಡ್ಡೆಯಿಂದ ಬಳಲುತ್ತಿರುವ ಬಿಬಿಸಿ ಟಿವಿ ನಿರೂಪಕಿ ನಿಕಿ ಚಾಪ್ಮನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಈ ಲೇಖನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ಇದೇ ಲೇಖನದಲ್ಲಿ ನಿಕಿ ಚಾಪ್ಮನ್ ಅವರು ತಮ್ಮ ಸಾಮಾಜಿಕ ಖಾತೆಯಲ್ಲಿ ತಮಗಿರುವ ಕಾಯಿಲೆಯ ಕುರಿತು ಮಾತನಾಡಿದ್ದಾರೆ ಎಂಬ ಮಾಹಿತಿ ನೀಡಲಾಗಿದೆ. ಹೀಗಾಗಿ ನಾವು ನಿಕಿ ಚಾಪ್ಮನ್ ಅವರ ಫೇಸ್ಬುಕ್ ಖಾತೆಯನ್ನು ಹುಡುಕಿದ್ದೇವೆ. ಆಗ ನಿಕಿ ಚಾಪ್ಮನ್ ಜನವರಿ 9, 2025 ರಂದು ಹಂಚಿಕೊಂಡು ಪೋಸ್ಟ್ ನಮಗೆ ಸಿಕ್ಕಿದೆ. ಇದರಲ್ಲಿ ನಮಗೆ ನೈಜ್ಯ ಫೋಟೋ ಕಂಡಿದೆ. ಈ ಮೂಲಕ ಚಾಪ್ಮನ್ ಮುಖವನ್ನು ವೈರಲ್ ಆಗುತ್ತಿರುವ ರಶ್ಮಿಕಾ ಮಂದಣ್ಣ ಅವರ ಮುಖದೊಂದಿಗೆ ಬದಲಾಯಿಸಲಾಗಿದೆ ಸ್ಪಷ್ಟವಾಗಿ ತಿಳಿಯುತ್ತದೆ. ಮೆದುಳಿನ ಗೆಡ್ಡೆಯ ನಂತರ ಕ್ರೇನಿಯೊಟಮಿಯಿಂದ ಚೇತರಿಸಿಕೊಳ್ಳುತ್ತಿರುವುದು, ಗೆಡ್ಡೆಯನ್ನು 5 ವರ್ಷಗಳ ಹಿಂದೆ ಯಶಸ್ವಿಯಾಗಿ ತೆಗೆದುಹಾಕಲಾಯಿತು ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದ 2019 ರ ಸುದ್ದಿ ವರದಿಯನ್ನು ನೀವು ಇಲ್ಲಿ ನೋಡಬಹುದು. ಇದರಲ್ಲಿ ಈ ಫೋಟೋವನ್ನು ಒಳಗೊಂಡಿವೆ. ಈ ಫೋಟೋವನ್ನು ರಶ್ಮಿಕಾ ಅವರಂತೆ ಕಾಣುವಂತೆ ಎಡಿಟ್ ಮಾಡಲಾಗಿದೆ.
ಇದಲ್ಲದೆ, ವೈರಲ್ ಪೋಸ್ಟ್‌ನಲ್ಲಿ ಅಲ್ಲು ಅರ್ಜುನ್, ಮಹೇಶ್ ಬಾಬು ಮತ್ತು ವಿಜಯ್ ದೇವರಕೊಂಡ ಅವರ ಫೋಟೋಗಳನ್ನು ಕೂಡ ಕಾಣಬಹುದು. ಈ ಫೋಟೋ ತೆಲುಗು ಹಿರಿಯ ನಟ-ಚಲನಚಿತ್ರ ನಿರ್ಮಾಪಕ, ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರ ಅಂತ್ಯಕ್ರಿಯೆಯ ಸಮಯದಲ್ಲಿ ತೆಗೆದಿದ್ದಾಗಿದೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ರಶ್ಮಿಕಾ ಮಂದಣ್ಣ ಅವರ ಕಾಲಿಗೆ ಗಾಯವಾಗಿದೆಯಷ್ಟೆ. ಆದರೆ, ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬುದು ಸುಳ್ಳು ಮತ್ತು ಈ ಫೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.