ಉತ್ತರ ಪ್ರದೇಶದಲ್ಲಿ ಸ್ಫೋಟಕಗಳನ್ನು ತುಂಬಿದ ಟ್ರಕ್‌ನೊಂದಿಗೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳುವ ವೀಡಿಯೊವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಇಬ್ಬರು ಪೊಲೀಸರು ಟ್ರಕ್ ಮುಂದೆ ಯುವಕನನ್ನು ಹಿಡಿದಿರುವುದನ್ನು ಕಾಣಬಹುದು. ಆ ಯುವಕನ ಮೇಲೆ ಬಂದೂಕುಗಳನ್ನು ಗುರಿಯಿಟ್ಟುಕೊಂಡಿರುವ ಪೊಲೀಸರೂ ಇದ್ದಾರೆ.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಐ ಲವ್ ಉತ್ತರ ಪ್ರದೇಶ ಪೊಲೀಸ್ ಬಿಹಾರ್ಗೇ ಹೊರಟಿದ್ದ RDX ತುಂಬಿದ ಲಾರಿಯನ್ನ ಹಿಡಿದು. ದೊಡ್ಡ ಅನಾಹುತವನ್ನ ತಪ್ಪಿಸಿದ ಉತ್ತರ ಪ್ರದೇಶ ಪೊಲೀಸ್ 2 ಜನ ಅರೆಸ್ಟ್ ಮಾಡಿದ ಪೊಲೀಸ್’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಜುಲೈ 8, 2020 ರಂದು ಭಾರತ-ನೇಪಾಳ ಗಡಿಯಲ್ಲಿರುವ ಸೋನೌಲಿಯಲ್ಲಿ ಪೊಲೀಸರು ಟ್ರಕ್ ಕಳ್ಳನನ್ನು ಬಂಧಿಸುವ ವೀಡಿಯೊವಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಜುಲೈ 8, 2020 ರಂದು ಲೈವ್ ಹಿಂದೂಸ್ತಾನ್ ಪ್ರಕಟಿಸಿದ ವರದಿ ಕಂಡುಬಂತು. ಇದರಲ್ಲಿ ವೈರಲ್ ವೀಡಿಯೊದಲ್ಲಿನ ಫೋಟೋ ಕಾಣಬಹುದು.
ಈ ಸುದ್ದಿಯ ಪ್ರಕಾರ, ಸೋನೌಲಿಯಿಂದ ಕದ್ದ ಟ್ರಕ್‌ನೊಂದಿಗೆ ಭಾರತ-ನೇಪಾಳ ಗಡಿಯನ್ನು ದಾಟಿದ ವ್ಯಕ್ತಿಯನ್ನು ಪೊಲೀಸರು ಹಿಡಿದಾಗ, ಟ್ರಕ್‌ನಲ್ಲಿ ಸ್ಫೋಟಕ ವಸ್ತು ಇದೆ ಎಂದು ಆತ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆತನನ್ನು ಸುತ್ತುವರೆದು ಬಂಧಿಸುತ್ತಿರುವ ದೃಶ್ಯ ಇದು. ಟ್ರಕ್ ಕಳ್ಳತನದ ಬಗ್ಗೆ ಸೋನೌಲಿ ಪೊಲೀಸರಿಗೆ ದೂರು ಬಂದ ತಕ್ಷಣ, ಈ ಸಂದೇಶವನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ. ಏತನ್ಮಧ್ಯೆ, ಪೊಲೀಸರು ಕ್ಯಾಂಪಿಯರ್‌ಗಂಜ್‌ನಲ್ಲಿ ಟ್ರಕ್ ಅನ್ನು ಪತ್ತೆಹಚ್ಚಿದರು. ನಂತರ ಪನಿಯೇರಾದಿಂದ ಮುಜುರಿಗೆ ಹೋಗುವ ದಾರಿಯಲ್ಲಿ ಪೊಲೀಸರು ಟ್ರಕ್ ಅನ್ನು ನಿಲ್ಲಿಸಿದರು. ಈ ಸಮಯದಲ್ಲಿ ಚಾಲಕ ಬೆದರಿಕೆ ಹಾಕಿದ್ದಾನೆ. ಉನ್ನಾವೊದ ವ್ಯಕ್ತಿಯೊಬ್ಬರು ಟ್ರಕ್ ಅನ್ನು ಕದ್ದಿದ್ದಾರೆ. ಆತನನ್ನು ಬಂಧಿಸಿದ ಪೊಲೀಸರು ಟ್ರಕ್ ಅನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಪುರಂದರಪುರ, ಕೊಲ್ಹುಯಿ, ಫರೆಂಡಾ, ಕ್ಯಾಂಪಿಯರ್‌ಗಂಜ್ ಮತ್ತು ಪನಿಯೇರಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಅಕ್ಟೋಬರ್ 11 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ದೈನಿಕ್ ಭಾಸ್ಕರ್ ‘‘ನಕಲಿ ಆರ್‌ಡಿಎಕ್ಸ್ ವಿಡಿಯೋ ವೈರಲ್ ಮಾಡಿದ್ದಕ್ಕಾಗಿ ಪ್ರಕರಣ ದಾಖಲು: ಪಣಿಯಾರ ಪೊಲೀಸರು 7 ಮಂದಿ ಹೆಸರಿಸಲಾದ ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.
ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಆರ್‌ಡಿಎಕ್ಸ್ ಪತ್ತೆಯಾದ ವದಂತಿಗಳನ್ನು ಹರಡುವ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಪನಿಯಾರ ಪೊಲೀಸರು ಏಳು ಹೆಸರುಗಳು ಮತ್ತು ಹಲವಾರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 2020 ರ ಈ ವೀಡಿಯೊವನ್ನು ಪ್ರಸ್ತುತ ಘಟನೆ ಎಂದು ತಪ್ಪಾಗಿ ಪ್ರಸಾರ ಮಾಡಲಾಗಿದೆ. ಈ ಘಟನೆ ವಾಸ್ತವವಾಗಿ ನಾಲ್ಕು ವರ್ಷ ಹಳೆಯದು, ಈ ಪೋಸ್ಟ್‌ಗಳು ಆ ಪ್ರದೇಶದಲ್ಲಿ ಗೊಂದಲಮಯ ವಾತಾವರಣವನ್ನು ಸೃಷ್ಟಿಸಿ ವದಂತಿಗಳನ್ನು ಹರಡಿದವು. ಮುಜುರಿ ಹೊರಠಾಣೆ ಉಸ್ತುವಾರಿ ವಹಿಸಿರುವ ಏಳು ಮಂದಿ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಆಶಿಶ್ ಕುಮಾರ್ ಸಿಂಗ್ ಹೇಳಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ಆರ್‌ಡಿಎಕ್ಸ್ ತುಂಬಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆಯೇ ಎಂದು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪನಿಯಾರ ಪೊಲೀಸರು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು Amar Ujala ಕೂಡ ವರದಿ ಮಾಡಿರುವುದನ್ನು ನೀವು ಇಲ್ಲಿ ನೋಡಬಹುದು.
ಹೀಗಾಗಿ ಲಭ್ಯವಿರುವ ಮಾಹಿತಿಯಿಂದ, ಉತ್ತರ ಪ್ರದೇಶದಲ್ಲಿ ಸ್ಫೋಟಕಗಳೊಂದಿಗೆ ಯುವಕನನ್ನು ಬಂಧಿಸಲಾಗಿದೆ ಎಂದು ಪ್ರಸಾರವಾಗುತ್ತಿರುವ ವೀಡಿಯೊ ವಾಸ್ತವವಾಗಿ 2020 ರಲ್ಲಿ ಸೋನೌಲಿಯಿಂದ ಟ್ರಕ್ ಕದ್ದ ವ್ಯಕ್ತಿಯ ಬಂಧನದ ವೀಡಿಯೊ ಎಂಬುದು ಸ್ಪಷ್ಟವಾಗಿದೆ.