
ಬಾಂಗ್ಲಾದೇಶದ ಉಗ್ರಗಾಮಿ ಗುಂಪುಗಳು ಚಿತ್ತಗಾಂಗ್‌ನಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿರುವ ಬಗ್ಗೆ ಇತ್ತೀಚೆಗೆ ವರದಿಗಳು ಹೊರಬಿದ್ದಿವೆ. ಈ ಘಟನೆಯಿಂದ ಅನೇಕ ಹಿಂದೂಗಳನ್ನು ಸುರಕ್ಷಿತ ಆಶ್ರಯಕ್ಕಾಗಿ ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಇದು ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯವನ್ನು ಹೆಚ್ಚಿಸಿದೆ.
ಈ ಉದ್ವಿಗ್ನ ಪರಿಸ್ಥಿತಿ ನಡುವೆ, ಬಾಂಗ್ಲಾದೇಶದ ಹಿಂದೂ ದೇವಾಲಯದ ಮೇಲೆ ಮುಸ್ಲಿಮರು ದಾಳಿ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಂದು ನಿಮಿಷದ ಅವಧಿಯ ಕ್ಲಿಪ್ನಲ್ಲಿ, ಕೋಲುಗಳು ಮತ್ತು ರಾಡ್‌ಗಳನ್ನು ಬಳಸಿ ಕಟ್ಟಡವನ್ನು ಧ್ವಂಸ ಮಾಡುವ ಜನರ ದೊಡ್ಡ ಗುಂಪನ್ನು ತೋರಿಸುತ್ತದೆ. ವೀಡಿಯೊದಲ್ಲಿ ಕೆಲವು ವ್ಯಕ್ತಿಗಳು ಇಸ್ಲಾಮಿಕ್ ಧಾರ್ಮಿಕ ವೇಷಭೂಷಣಗಳಾದ ಸ್ಕಲ್ ಕ್ಯಾಪ್ಸ್ ಮತ್ತು ಕಂದೂರಗಳನ್ನು ಧರಿಸಿರುವುದು ಕಂಡುಬರುತ್ತದೆ.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಾವಿರಾರು ಸುನ್ನಿ ಬಾಂಗ್ಲಾದೇಶಿಗಳು ಹಿಂದೂ ದೇವಾಲಯಗಳನ್ನು ಒಡೆಯುತ್ತಿದ್ದಾರೆ, ಹಿಂದೂಗಳನ್ನು ಕಂಡಲ್ಲಿ ಕೊಲ್ಲುತ್ತಿದ್ದಾರೆ. ಆದರೆ ಹಿಂದೂಗಳು ಮಾತ್ರ ಡೆಕಾಥ್ಲಾನ್, ಜಾರಾ, ಮಾರ್ಕ್ಸ್ ಎಂಬ ಹಲವು ಮೇಡ್ ಇನ್ ಬಾಂಗ್ಲಾದೇಶದ ವಸ್ತುಗಳನ್ನು ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ. ಹಿಂದೂಗಳೇ ಬಹಿಷ್ಕರಿಸಿ ಜಾಗೃತರಾಗಿ’’ ಎಂದು ಬರೆದುಕೊಂಡಿದ್ದಾರೆ.
ಅನೇಕರು ಇದೇ ರೀತಿಯ ಹಕ್ಕುಗಳೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸೌತ್ ಚೆಕ್ ಈ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ವೀಡಿಯೊವು ಹಿಂದೂ ದೇವಾಲಯದ ಮೇಲಿನ ದಾಳಿಯನ್ನು ತೋರಿಸುವುದಿಲ್ಲ. ಬದಲಾಗಿ ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದ ಸಿರಾಜ್‌ಗಂಜ್‌ನಲ್ಲಿರುವ ಸೂಫಿ ಮಂದಿರವನ್ನು ಧ್ವಂಸಗೊಳಿಸುತ್ತಿರುವುದಾಗಿದೆ.
ನಿಜಾಂಶ ತಿಳಿಯಲು ವೈರಲ್ ವೀಡಿಯೊದ ಕೀಫ್ರೇಮ್ ತೆಗೆದು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಆಗಸ್ಟ್ 29, 2024 ರ ದಿನಾಂಕದ ಯೂಟ್ಯೂಬ್ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಒಂದು ಸಿಕ್ಕಿದೆ.
‘ಹಜರತ್ ಬಾಬಾ ಅಲಿ ಪಾಗ್ಲಾ (RA) ರ ಮುಬಾರಕ್ ಪವಿತ್ರ ಮಂದಿರ, ಮನ್ಸೂರ್ ನಗರ, ಕಾಜಿಪುರ, ಸಿರಾಜ್‌ಗಂಜ್ ಅನ್ನು ಧ್ವಂಸಗೊಳಿಸಿದರು’ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಯೂಟ್ಯೂಬ್ ವೀಡಿಯೊದಲ್ಲಿನ ದೃಶ್ಯಗಳು ವೈರಲ್ ದೃಶ್ಯಗಳನ್ನು ಹೋಲುತ್ತವೆ. ಹೀಗಾಗಿ ಇವೆರಡಕ್ಕೂ ಸಂಬಂಧವಿದೆ ಎಂದು ಖಚಿತಪಡಿಸುತ್ತದೆ.
ಈ ಘಟನೆಯು ವಾರ್ಡ್ ನಂ 9, ದಕ್ಷಿಣ್ ಕುರಿಯಾ ಬಾರಿ, ಮನ್ಸೂರ್ ನಗರ, ಕಾಜಿಪುರ, ಸಿರಾಜ್‌ಗಂಜ್‌ನಲ್ಲಿ ಸಂಭವಿಸಿದೆ ಎಂದು ವೀಡಿಯೊ ವಿವರಣೆಯು ಸುಳಿವು ನೀಡಿತು. ಈ ಮಾಹಿತಿಯ ಆಧಾರದ ಮೇಲೆ ಹುಡುಕಿದಾಗ ಬಾಂಗ್ಲಾದೇಶದ ಸ್ಥಳೀಯ ವರದಿಗೆ ನಮ್ಮನ್ನು ಕರೆದೊಯ್ಯಿತು. ಕಲೇರ್ಕಾಂತೋ ಸುದ್ದಿ ತಾಣ ಆಗಸ್ಟ್ 31, 2024 ರಂದು ಈ ಘಟನೆಯ ಕುರಿತು ವರದಿ ಮಾಡಿರುವುದು ಸಿಕ್ಕಿದೆ: 'ದೇಗುಲದ ಧ್ವಂಸದಿಂದಾಗಿ ಮಸೀದಿಯ ಇಮಾಮ್ ಅನ್ನು ವಜಾಗೊಳಿಸಲಾಗಿದೆ' (ಬಾಂಗ್ಲಾದಿಂದ ಅನುವಾದಿಸಲಾಗಿದೆ) ಎಂಬ ಶೀರ್ಷಿಕೆ ನೀಡಲಾಗಿದೆ.
ವರದಿಯ ಪ್ರಕಾರ, ‘‘ಹಜರತ್ ಬಾಬಾ ಅಲಿ ಪಾಗ್ಲಾ (ಆರ್‌ಎ) ಅವರ ದೇವಾಲಯವನ್ನು ಆಗಸ್ಟ್ 29, 2024 ರ ರಾತ್ರಿ ಇಮಾಮ್ ಗುಲಾಮ್ ರಬ್ಬಾನಿ ನೇತೃತ್ವದ ನೂರಾರು ಜನರು ಧ್ವಂಸಗೊಳಿಸಿದರು. ಸಿರಾಜ್‌ಗಂಜ್‌ನ ಬಮಂಜನಿ ಬಜಾರ್ ಬಳಿಯ ದೇಗುಲವನ್ನು ಧ್ವಂಸ ಮಾಡಲು ಗುಂಪು ಸುತ್ತಿಗೆ, ಗುದ್ದಲಿ ಮತ್ತು ಕೋಲುಗಳನ್ನು ಬಳಸಿತು. ದಾಳಿಕೋರರು ದೇಗುಲದ ಮೇಲೆ ಹತ್ತಿ ತುಳಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ನಂತರ, ಇಮಾಮ್ ಗುಲಾಮ್ ರಬ್ಬಾನಿ ಅವರನ್ನು ಆಗಸ್ಟ್ 31, 2024 ರಂದು ಸ್ಥಳೀಯ ಗ್ರಾಮಸ್ಥರು ಮಸೀದಿಯಲ್ಲಿನ ಸ್ಥಾನದಿಂದ ತೆಗೆದುಹಾಕಿದರು.’’
‘‘ದೇಗುಲದ ಮೇಲಿನ ದಾಳಿಯ ನೇತೃತ್ವ ವಹಿಸಿದ್ದ ಇಮಾಮ್‌ನನ್ನು ಗ್ರಾಮಸ್ಥರು ಹೊರಹಾಕಿದ್ದಾರೆ ಎಂದು ವರದಿ ಹೇಳಿದೆ. ಇದು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಸಹ ಒಳಗೊಂಡಿದೆ. ವರದಿಯ ಪ್ರಕಾರ, ಕಾಜಿಪುರ ಪೊಲೀಸ್ ಠಾಣಾಧಿಕಾರಿ ಶಾಹಿದುಲ್ ಇಸ್ಲಾಂ ಅವರು ಘಟನೆಯ ಬಗ್ಗೆ ತಮಗೆ ತಿಳಿದಿದ್ದರೂ, ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಯಾವುದೇ ಔಪಚಾರಿಕ ದೂರುಗಳನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ’’ ಎಂಬ ಮಾಹಿತಿ ವರದಿಯಲ್ಲಿದೆ.
ಹೀಗಾಗಿ, ಬಾಂಗ್ಲಾದೇಶದ ಹಿಂದೂ ದೇವಾಲಯದ ಮೇಲೆ ಮುಸ್ಲಿಮರು ದಾಳಿ ನಡೆಸುತ್ತಿದ್ದಾರೆಂದು ತೋರಿಸುವ ವೈರಲ್ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ದೃಶ್ಯಾವಳಿಯು ಆಗಸ್ಟ್ 2024 ರಲ್ಲಿ ಬಾಂಗ್ಲಾದೇಶದ ಸಿರಾಜ್‌ಗಂಜ್‌ನಲ್ಲಿರುವ ಸೂಫಿ ಮಂದಿರವನ್ನು ಧ್ವಂಸಗೊಳಿಸಿದ ಘಟನೆಯದ್ದಾಗಿದೆ.