ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಬಹುಮಹಡಿಯ ಕಟ್ಟಡವೊಂದು ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿರುವುದನ್ನು ಕಾಣಬಹುದು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಘರ್ಷಣೆಗಳ ಮಧ್ಯೆ ಇಸ್ಲಾಮಾಬಾದ್‌ನ ಮ್ಯಾರಿಯಟ್ ಹೋಟೆಲ್‌ನಲ್ಲಿ ಸ್ಫೋಟಗೊಂಡಿದೆ ಹಾಗೂ ಇದರಲ್ಲಿ 17 ಪಾಕಿಸ್ತಾನಿ ಸೇನಾಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕೆಲವೇ ನಿಮಿಷಗಳ ಹಿಂದೆ, ಇಸ್ಲಾಮಾಬಾದ್‌ನಲ್ಲಿ ಎರಡು ಪ್ರಬಲ ಸ್ಫೋಟಗಳು ಸಂಭವಿಸಿದವು. ಇದರ ನಂತರ, 18 ರಿಂದ 22 ಹೋರಾಟಗಾರರು ಮ್ಯಾರಿಯಟ್ ಹೋಟೆಲ್‌ಗೆ ಪ್ರವೇಶಿಸಿ ಭಾರೀ ಗುಂಡಿನ ದಾಳಿ ನಡೆಸಿದರು. ಈಗ ಭೀಕರ ಕಾಳಗ ನಡೆಯುತ್ತಿದೆ. ಹೋಟೆಲ್‌ನಲ್ಲಿ ಹಲವಾರು ಹಿರಿಯ ಪಾಕಿಸ್ತಾನಿ ಸೇನಾ ಅಧಿಕಾರಿಗಳ ಪ್ರಮುಖ ಸಭೆ ನಡೆಯುತ್ತಿತ್ತು. ಇತ್ತೀಚಿನ ಮಾಹಿತಿಯ ಪ್ರಕಾರ, ಮ್ಯಾರಿಯಟ್ ಹೋಟೆಲ್ ಮೇಲಿನ ದಾಳಿಯಲ್ಲಿ 17 ಪಾಕಿಸ್ತಾನಿ ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಫೆಬ್ರವರಿ 2023 ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ನಡೆಸಿದ ದಾಳಿಯ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಫೆಬ್ರವರಿ 18, 2023 ರಂದು ಸಿಎನ್‌ಎನ್ ಅರೇಬಿಕ್ ಇದೇ ವೈರಲ್ ವೀಡಿಯೊದೊಂದಿಗೆ ವರದಿಯನ್ನು ಮಾಡಿರುವುದು ಸಿಕ್ಕಿದೆ. ಇದು ಕರಾಚಿಯ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ಉಗ್ರರ ದಾಳಿ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಘಟನೆಯು ನಗರದ ಪ್ರಮುಖ ಮಾರ್ಗಗಳು ಮತ್ತು ಅರೆಸೈನಿಕ ಠಾಣೆಗಳ ಬಳಿ ಇರುವ ಹೆದ್ದಾರಿ ಫೈಸಲ್ ಸ್ಟ್ರೀಟ್‌ನಲ್ಲಿ ನಡೆದಿದೆ.
ಫೆಬ್ರವರಿ 18, 2023 ರಂದು ಅದೇ ವೀಡಿಯೊವನ್ನು ಒಳಗೊಂಡ ಬಿಬಿಸಿ ವರದಿಯು ಪೊಲೀಸ್ ಪ್ರಧಾನ ಕಚೇರಿಯ ಮೇಲಿನ ಪಾಕಿಸ್ತಾನಿ ತಾಲಿಬಾನ್ ದಾಳಿಯನ್ನು ವಿವರಿಸಿದೆ. "ಹಲವಾರು ಗಂಟೆಗಳ ನಂತರ ಭದ್ರತಾ ಪಡೆಗಳು ನಿಯಂತ್ರಣವನ್ನು ಮರಳಿ ಪಡೆದುಕೊಂಡವು ಮತ್ತು ಮೂವರು ಉಗ್ರರನ್ನು ಕೊಂದವು ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ. ದಾಳಿಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದಾರೆ. ದಾಳಿಯ ಸಮಯದಲ್ಲಿ ಸುಮಾರು 30 ಅಧಿಕಾರಿಗಳು ಒಳಗೆ ಇದ್ದಿರಬಹುದು ಎಂದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಇರ್ಫಾನ್ ಬಲೋಚ್ ತಿಳಿಸಿದ್ದಾರೆ." ಎಂದು ವರದಿಯಲ್ಲಿದೆ.
ಫೆಬ್ರವರಿ 2023 ರಲ್ಲಿ ಕರಾಚಿಯಲ್ಲಿ ನಡೆದ ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ದಾಳಿಯನ್ನು ಹಲವಾರು ಇತರ ಮಾಧ್ಯಮಗಳು ಸಹ ವರದಿ ಮಾಡಿದ್ದವು. ಅದನ್ನು ನೀವು ಇಲ್ಲಿ, ಇಲ್ಲಿ ಓದಬಹುದು.
ಇದಲ್ಲದೆ, ಇತ್ತೀಚಿನ ಪಾಕಿಸ್ತಾನ-ಅಫ್ಘಾನಿಸ್ತಾನ ಸಂಘರ್ಷದ ಮಧ್ಯೆ ಇಸ್ಲಾಮಾಬಾದ್‌ನ ಮ್ಯಾರಿಯಟ್ ಹೋಟೆಲ್ ಮೇಲಿನ ದಾಳಿಯ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಸಿಗಲಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ ಇಸ್ಲಾಮಾಬಾದ್‌ನ ಹೋಟೆಲ್ ಮೇಲಿನ ದಾಳಿ ನಡೆದಿದೆ ಹಾಗೂ ಪಾಕಿಸ್ತಾನ ಸೇನಾಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವೈರಲ್ ಆಗುತ್ತಿರುವುದು ಸಂಬಂಧವಿಲ್ಲದ ವೀಡಿಯೊ ಎದು ನಾವು ಖಚಿತವಾಗಿ ಹೇಳುತ್ತೇವೆ.