Kannada

Fact Check: 95 ವರ್ಷದ ಅಜ್ಜಿ ಪೋಲ್ ವಾಲ್ಟ್ ಮಾಡಿದರೇ? ವೈರಲ್ ವಿಡಿಯೊದ ಅಸಲಿ ಸತ್ಯ ಇಲ್ಲಿದೆ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ 95 ವರ್ಷದ ಮಹಿಳೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕ್ರೀಡಾಂಗಣದಲ್ಲಿ ಯುವ ಕ್ರೀಡಾಪಟುಗಳ ನಡುವೆ ನಿಂತಿರುವ ವೃದ್ಧ ಮಹಿಳೆ ಕೈಯಲ್ಲಿ ಕೋಲು ಹಿಡಿದು ಓಡಿ ಬಂದು ಪೋಲ್ ವಾಲ್ಟ್ ಮಾಡುವ ದೃಶ್ಯ ಈ ವಿಡಿಯೊದಲ್ಲಿದೆ.

vinay bhat

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ 95 ವರ್ಷದ ಮಹಿಳೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕ್ರೀಡಾಂಗಣದಲ್ಲಿ ಯುವ ಕ್ರೀಡಾಪಟುಗಳ ನಡುವೆ ನಿಂತಿರುವ ವೃದ್ಧ ಮಹಿಳೆ ಕೈಯಲ್ಲಿ ಕೋಲು ಹಿಡಿದು ಓಡಿ ಬಂದು ಪೋಲ್ ವಾಲ್ಟ್ ಮಾಡುವ ದೃಶ್ಯ ಈ ವಿಡಿಯೊದಲ್ಲಿದೆ. ಅವರು ಯಶಸ್ವಿಯಾಗಿ ಎತ್ತರಕ್ಕೆ ಜಿಗಿಯುತ್ತಿದ್ದಂತೆ ಸುತ್ತಲಿದ್ದವರು ಚಪ್ಪಾಳೆ ತಟ್ಟಿ ಅಭಿನಂದಿಸುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘95ರ ವಯಸ್ಸಿನಲ್ಲಿ ಕೈಯಲ್ಲಿ ಕೋಲು ಹಿಡಿದು ಟ್ರ್ಯಾಕ್‌ಗೆ ಇಳಿದ ಅಜ್ಜಿ. ನಂತರ ಅಲ್ಲೇ ಓಡಲು ಶುರು ಮಾಡಿದರು! ವಯಸ್ಸು ಕೇವಲ ಒಂದು ಸಂಖ್ಯೆ; ನಿಜವಾದ ಶಕ್ತಿ ಧೈರ್ಯದಲ್ಲಿದೆ. ಆಸಕ್ತಿ ಮತ್ತು ಉತ್ಸಾಹ ಜೀವಂತವಾಗಿದ್ದರೆ, ಯಾವುದೇ ವಯಸ್ಸು ನಮ್ಮ ದಾರಿಗೆ ಅಡ್ಡಿಯಾಗಲು ಸಾಧ್ಯವಿಲ್ಲ. ಇಂತಹ ದೃಶ್ಯವನ್ನು ಭಾರತದಲ್ಲಿ ಊಹಿಸಿಕೊಳ್ಳುವುದೇ ಕಷ್ಟ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ವಿಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಆಗ ಇದರಲ್ಲಿ ಕೆಲವು ದೃಶ್ಯಗಳು ಸಹಜವಾಗಿಲ್ಲ ಎಂಬುದು ಕಂಡುಬರುತ್ತದೆ. ವಿಡಿಯೊದ ಆರಂಭದಲ್ಲಿ ವೃದ್ಧ ಮಹಿಳೆಯ ಹಿಂದೆ ಕೆಲವು ಜನರು ನಿಂತಿರುವುದನ್ನು ಕಾಣಬಹುದು. ಆದರೆ ಅವರ ದೇಹಕ್ಕೆ ಹೋಲಿಸಿದರೆ ಕಾಲುಗಳ ಸಂಖ್ಯೆ ಹೆಚ್ಚು ಕಾಣಿಸುತ್ತದೆ. ಇದು ಎಐ ಮೂಲಕ ಸೃಷ್ಟಿಸಲಾದ ದೃಶ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ದೋಷಗಳಲ್ಲಿ ಒಂದಾಗಿದೆ. ಅದೇ ರೀತಿ, ಅಜ್ಜಿ ಕೋಲಿನ ಸಹಾಯದಿಂದ ಎತ್ತರಕ್ಕೆ ಜಿಗಿದು ಪೋಲ್ ವಾಲ್ಟ್ ಮಾಡಿದ ಬಳಿಕವೂ ಅವರ ಕಣ್ಣಿನ ಕನ್ನಡಕ ಕೆಳಗೆ ಬೀಳುವುದಿಲ್ಲ. ಇಂತಹ ಅಸಹಜ ವಿವರಗಳು ವಿಡಿಯೊದ ನೈಜತೆಯ ಬಗ್ಗೆ ಅನುಮಾನ ಮೂಡಿಸುತ್ತವೆ.

ಬಳಿಕ ನಾವು ವಿಡಿಯೊ ನೈಜವೇ ಅಥವಾ ಎಐ ಮೂಲಕ ಸೃಷ್ಟಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಹಲವು ಎಐ ಪತ್ತೆ ಸಾಧನಗಳನ್ನು ಬಳಸಿದ್ದೇವೆ.

ಮೊದಲಿಗೆ Hive Moderation ಮೂಲಕ ವಿಡಿಯೊವನ್ನು ಪರಿಶೀಲಿಸಿದಾಗ, ಇದು ಎಐ ಮೂಲಕ ಸೃಷ್ಟಿಯಾಗಿರುವ ಸಾಧ್ಯತೆ ಶೇ.71ಕ್ಕಿಂತ ಹೆಚ್ಚಿದೆ ಎಂದು ಫಲಿತಾಂಶ ಬಂದಿದೆ. WasitAI ಕೂಡ ಈ ವಿಡಿಯೊ ಎಐಯಿಂದ ರಚಿಸಿದೆ ಎಂದು ಹೇಳಿದೆ. ಹಾಗೆಯೆ UncovAI ಶೇ. 100 ರಷ್ಟು ಈ ವಿಡಿಯೊ ಎಐಯಿಂದ ರಚಿಸಲಾಗಿದೆ ಎಂಬ ಫಲಿತಾಂಶ ನೀಡಿದೆ.

ಇನ್ನು ವಿಡಿಯೊದ ಮೂಲವನ್ನು ಪತ್ತೆಹಚ್ಚಲು ಅದರ ಪ್ರಮುಖ ದೃಶ್ಯಗಳನ್ನು ತೆಗೆದುಕೊಂಡು ಗೂಗಲ್ ಲೆನ್ಸ್‌ನಲ್ಲಿ ಹುಡುಕಾಟ ನಡೆಸಲಾಗಿದೆ. ಈ ವೇಳೆ ಇದೇ ವಿಡಿಯೊವನ್ನು ‘Senior Salute’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 8 ರಂದು ಪ್ರಕಟಿಸಿರುವುದು ಪತ್ತೆಯಾಗಿದೆ. ಮುಖ್ಯವಾಗಿ, ಆ ಪೋಸ್ಟ್‌ಗೆ ಫೇಸ್‌ಬುಕ್‌ನಿಂದಲೇ AI Content ಎಂಬ ಗುರುತು ನೀಡಲಾಗಿದೆ.

ಈ ಖಾತೆಯನ್ನು ಪರಿಶೀಲಿಸಿದಾಗ ವೃದ್ಧರು ವಿವಿಧ ರೀತಿಯ ಸಾಹಸ ಮತ್ತು ಅಸಾಧಾರಣ ಚಟುವಟಿಕೆಗಳನ್ನು ಮಾಡುತ್ತಿರುವ ಹಲವು ವಿಡಿಯೊಗಳು ಕಂಡುಬಂದಿವೆ. ಅವುಗಳಿಗೂ ಎಐ ಕಂಟೆಂಟ್ ಎಂಬ ಗುರುತು ಇರುವುದು ಪತ್ತೆಯಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 95 ವರ್ಷದ ಮಹಿಳೆಯೊಬ್ಬರು ಕ್ರೀಡಾಕೂಟದಲ್ಲಿ ಪೋಲ್ ವಾಲ್ಟ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ ಎಂಬ ವೈರಲ್ ವಿಡಿಯೊ ನಿಜವಲ್ಲ. ವಿಡಿಯೊದಲ್ಲಿ ಕಾಣಿಸುವ ದೃಶ್ಯಗಳನ್ನು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Video shows Ukraine’s recent strike on Russia’s Kuibyshev oil refinery? No, here are the facts

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: இரு கைகளும் இல்லாத பெண் ஜிம்னாஸ்டிக்ஸ் செய்யும் வைரல் காணொலி உண்மையா?

Fact Check: ದೆಹಲಿಯಲ್ಲಿ ಮಳೆಯ ನಡುವೆಯೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ? ಇಲ್ಲ, ಇದು ಹಳೆಯ ವಿಡಿಯೊ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్