Kannada

Fact Check: ಬುರ್ಖಾ ಧರಿಸಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನ ಬಾಂಗ್ಲಾದೇಶದ ವೀಡಿಯೊ ಭಾರತದ್ದು ಎಂದು ವೈರಲ್

ಬುರ್ಖಾ ಧರಿಸಿದ ಓರ್ವ ವ್ಯಕ್ತಿ ಮೊದಲಿಗೆ ಕನ್ನಡಕ ತೆಗೆದು ನಂತರ ತನ್ನ ಮುಖದಿಂದ ಹಿಜಾಬ್ ತೆಗೆಯುತ್ತಾನೆ. ಬಳಿಕ ಕೋಣೆಯಲ್ಲಿ ಗದ್ದಲ ಉಂಟಾಗುತ್ತದೆ. ಅನೇಕ ಬಳಕೆದಾರರು ಈ ಘಟನೆ ಭಾರತದ್ದು ಎಂದು ಹೇಳುತ್ತಿದ್ದು, ದೇಶದಲ್ಲಿ ಬುರ್ಖಾ ನಿಷೇಧವಾಗಬೇಕು ಎಂದು ಹೇಳುತ್ತಿದ್ದಾರೆ.

vinay bhat

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಬುರ್ಖಾ ಧರಿಸಿದ ಓರ್ವ ವ್ಯಕ್ತಿ ಮೊದಲಿಗೆ ಕನ್ನಡಕ ತೆಗೆದು ನಂತರ ತನ್ನ ಮುಖದಿಂದ ಹಿಜಾಬ್ ತೆಗೆಯುತ್ತಾನೆ. ಬಳಿಕ ಕೋಣೆಯಲ್ಲಿ ಗದ್ದಲ ಉಂಟಾಗುತ್ತದೆ ಮತ್ತು ಅಲ್ಲಿದ್ದ ಜನರು ಅವನನ್ನು ಪ್ರಶ್ನಿಸಲು ಪ್ರಾರಂಭಿಸುತ್ತಾರೆ. ಅನೇಕ ಬಳಕೆದಾರರು ಈ ಘಟನೆ ಭಾರತದ್ದು ಎಂದು ಹೇಳುತ್ತಿದ್ದು, ದೇಶದಲ್ಲಿ ಬುರ್ಖಾ ನಿಷೇಧವಾಗಬೇಕು ಎಂದು ಹೇಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬುರ್ಖಾ ಬ್ಯಾನ್ ಆಗಬೇಕು ಇಲ್ಲಾಂದ್ರೆ ದೇಶ ದ್ರೋಹಿಗಳು ಈ ದೇಶವನ್ನು ಹಾಳು ಮಾಡುತ್ತಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಬಾಂಗ್ಲಾದೇಶದ್ದಾಗಿದ್ದು, ಬುರ್ಖಾ ಧರಿಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯ ವೇಳೆ ಸಿಕ್ಕಿಬಿದ್ದಿದ್ದಾನೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಬಾಂಗ್ಲಾದೇಶದ ಅನೇಕ ಮಾಧ್ಯಮ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂತು. ಜುಲೈ 24 ರ ಢಾಕಾಮೇಲ್‌ನ ವರದಿಯ ಪ್ರಕಾರ, ಈ ಘಟನೆ ಜುಲೈ 23 ರ ಬುಧವಾರದಂದು ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಗರದಲ್ಲಿ ನಡೆದಿದೆ. ವೀಡಿಯೊದಲ್ಲಿ ಬುರ್ಖಾ ಧರಿಸಿ ಕಾಣಿಸಿಕೊಂಡ ವ್ಯಕ್ತಿ 27 ವರ್ಷದ ರಶೀದ್ ಅಹ್ಮದ್, ಅವರನ್ನು ಕಾಕ್ಸ್ ಬಜಾರ್‌ನ ಟೆಕ್ನಾಫ್ ಪ್ರದೇಶದ ಶಲ್ಬಗನ್ ಚೆಕ್‌ಪೋಸ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ. ರಶೀದ್ ರೋಹಿಂಗ್ಯಾ ಕ್ಯಾಂಪ್ ಸಂಖ್ಯೆ 26 ರ ನಿವಾಸಿ ಫರೀದ್ ಅಹ್ಮದ್ ಅವರ ಮಗ.

ರಶೀದ್ ಬುರ್ಖಾ ಧರಿಸಿ ಶಿಬಿರದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಮತ್ತು ಪೊಲೀಸರನ್ನು ದಾರಿ ತಪ್ಪಿಸುವ ಮೂಲಕ ಕೆಲವು ಅಪರಾಧ ಚಟುವಟಿಕೆಗಳನ್ನು ನಡೆಸಲು ಬಯಸಿದ್ದಿರಬಹುದು ಎಂದು ಪೊಲೀಸರು ಹೇಳಿರುವುದಾಗಿ ಢಾಕಾಮೈಲ್ ವರದಿ ಮಾಡಿದೆ. ‘‘ಅವನ ಉಡುಗೆ ತೊಡಕಿನ ನೋಟ, ವಿಚಿತ್ರ ನಡವಳಿಕೆ ಮತ್ತು ತೊದಲುವಿಕೆಯ ನಾಲಿಗೆಯನ್ನು ನೋಡಿ, ಪೊಲೀಸರು ಅವನ ಮೇಲೆ ಅನುಮಾನಗೊಂಡು ತಡೆದರು. ಈಗ ಈ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಟೆಕ್ನಾಫ್ ಮಾದರಿ ಪೊಲೀಸ್ ಠಾಣೆಯ ಅಧಿಕಾರಿ ಗಿಯಾಸುದ್ದೀನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ’’ ಎಂದು ವರದಿಯಲ್ಲಿದೆ.

ಬಾಂಗ್ಲಾದ ಸ್ಥಳೀಯ ಮಾಧ್ಯಮ Kalbela , Prothomalo, Jugantor ವರದಿಗಳ ಪ್ರಕಾರ, ಈ ಘಟನೆ ಜುಲೈ 23 (2025) ರ ರಾತ್ರಿ ಟೆಕ್ನಾಫ್‌ನ ಹನಿಲಾದಲ್ಲಿರುವ ಶಾಲ್ಬಗನ್ ಪೊಲೀಸ್ ಹೊರಠಾಣೆ ಬಳಿ ನಡೆದಿದೆ. ರಶೀದ್ ಅಹ್ಮದ್ (27) ಎಂಬ ಯುವಕ ಬುರ್ಖಾ ಧರಿಸಿ ರೋಹಿಂಗ್ಯಾ ನಿರಾಶ್ರಿತರ ಶಿಬಿರಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಆತನನ್ನು ಶಿಬಿರ ಸಂಖ್ಯೆ 26 ರ ಫರೀದ್ ಅಹ್ಮದ್ ಅವರ ಮಗ ಎಂದು ಗುರುತಿಸಲಾಗಿದೆ. ಆತ ಕಾಲ್ನಡಿಗೆಯಲ್ಲಿ ಚೆಕ್‌ಪಾಯಿಂಟ್ ದಾಟುತ್ತಿದ್ದ. ಅವನ ಕ್ರಮಗಳು ಅನುಮಾನಾಸ್ಪದವಾಗಿ ಕಂಡುಬಂದಾಗ, ಅವನನ್ನು ಪ್ರಶ್ನಿಸಲಾಯಿತು. ಸರಿಯಾಗಿ ಉತ್ತರಿಸಲು ಸಾಧ್ಯವಾಗದಿದ್ದಾಗ, ಅವನನ್ನು ವಶಕ್ಕೆ ಪಡೆಯಲಾಯಿತು, ಕಾನೂನು ಕ್ರಮವನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರ ಹೇಳಿಕೆ ಇದರಲ್ಲಿದೆ.

ಹೀಗಾಗಿ ಈ ವೀಡಿಯೊಕ್ಕು ಭಾರತಕ್ಕು ಯಾವುದೇ ಸಂಬಂಧವಿಲ್ಲ, ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Vijay Devarakonda parkour stunt video goes viral? No, here are the facts

Fact Check: ഗോവിന്ദച്ചാമി ജയില്‍ ചാടി പിടിയിലായതിലും കേരളത്തിലെ റോഡിന് പരിഹാസം; ഈ റോഡിന്റെ യാഥാര്‍ത്ഥ്യമറിയാം

Fact Check: ஏவுகணை ஏவக்கூடிய ட்ரோன் தயாரித்துள்ள இந்தியா? வைரல் காணொலியின் உண்மை பின்னணி

Fact Check : 'ట్రంప్‌ను తన్నండి, ఇరాన్ చమురు కొనండి' ఒవైసీ వ్యాఖ్యలపై మోడీ, అమిత్ షా రియాక్షన్? లేదు, నిజం ఇక్కడ తెలుసుకోండి

Fact Check: ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಹಿಂದೂ ಬಾಲಕಿ ಕುತ್ತಿಗೆಗೆ ಚಾಕುವಿನಿಂದ ಇರಿಯಲು ಹೋಗಿದ್ದು ಮುಸ್ಲಿಂ ಯುವಕನೇ?