ಬಾಂಗ್ಲಾದೇಶದಲ್ಲಿ ಹಿಂಸಾಚಾರ ಕೊಂಚ ಹತೋಟಿಗೆ ಬಂದಿದೆ. ಶಾಲಾ-ಕಾಲೇಜುಗಳು ಪುನರಾರಂಭವಾಗಿದೆ. ಆದರೆ, ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಮೇಲಿನ ಹಲ್ಲೆಯ ಕುರಿತು ಅನೇಕ ವೀಡಿಯೊಗಳು ವೈರಲ್ ಆಗುತ್ತಿವೆ.
ಇದೀಗ ಈ ಪ್ರಕ್ಷುಬ್ಧತೆಯ ನಡುವೆ, ಬಾಂಗ್ಲಾದೇಶದ ಸೇನೆಯು ಅಲ್ಲಿನ ದುಷ್ಕರ್ಮಿಗಳೊಂದಿಗೆ ಸೇರಿ ಹಿಂದೂಗಳನ್ನು ಅವರ ಮನೆಗಳಿಂದ ಹೊರಹಾಕುತ್ತಿದೆ ಮತ್ತು ಬಲವಂತವಾಗಿ ಅಲ್ಲಿಂದ ಓಡಿಸುತ್ತಿದೆ ಎಂದು ಹೇಳುವ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಶ್ರೀಹಸ್ತಿನಿ ಎಂಬವರು ಆಗಸ್ಟ್ 20, 2024 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘ಈಗ ಬಾಂಗ್ಲಾದೇಶದ ಗಲಭೆಕೋರರ ಜೊತೆಗೆ ಅಲ್ಲಿನ ಸೇನೆಯೂ ಅವರಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ ಮತ್ತು ಹಿಂದೂಗಳನ್ನು ದೊಡ್ಡ ಮನೆಗಳು ಮತ್ತು ಬಂಗಲೆಗಳಿಂದ ಅವರ ಮನೆಗಳಿಂದ ಹೊರಹಾಕಲಾಗಿದೆ, ಹೊಡೆದು ಬಾಂಗ್ಲಾದೇಶದಿಂದ ಓಡಿಸಲಾಗುತ್ತಿದೆ.’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಮರಿಯಪ್ಪ ಕೊಟ್ನಿಕಲ್ ಎಂಬವರು ಆಗಸ್ಟ್ 19, 2024 ರಂದು ಇದೇ ವೀಡಿಯೊ ಅಪ್ಲೋಡ್ ಮಾಡಿ, ‘ಈಗ, ಬಾಂಗ್ಲಾದೇಶಿ ಜಿಹಾದಿಗಳೊಂದಿಗೆ, ಅಲ್ಲಿಯ ಸೈನ್ಯವೂ ಅವರಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ ಮತ್ತು ದೊಡ್ಡ ಮನೆಗಳು ಮತ್ತು ಬಂಗಲೆಗಳಿಂದ ಹಿಂದೂಗಳನ್ನು ಅವರ ಮನೆಗಳಿಂದ ಹೊರಹಾಕಲಾಗುತ್ತಿದೆ. ಹಾಗೆಯೇ ದೊಡ್ಡ ಮನೆಗಳು ಮತ್ತು ಬಂಗಲೆಗಳನ್ನು ಹೊಂದಿರುವ ಹಿಂದೂಗಳು ಅಲ್ಲಿನ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲು ಹೋಗಿಲ್ಲ ತಮ್ಮ ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಪ್ರವಾಸ ಹೋಗಿದ್ದರು, ದಯವಿಟ್ಟು ಇಲ್ಲಿನ ಅಂತಹವರಿಗೆ ಪಾಠ ಕಲಿಸಲು ಶೇರ್ ಮಾಡಿ’ ಎಂದು ಅಡಿ ಬರಹ ನೀಡಿದ್ದಾರೆ.
ಇದೇರೀತಿಯ ವೈರಲ್ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ಕಾಣಬಹುದು.
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ದರೋಡೆ ಘಟನೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಬಾಂಗ್ಲಾದೇಶ ಸೇನೆಯ ಕ್ರಮ ಕೈಗೊಳ್ಳುತ್ತಿರುವ ವಿಡಿಯೋ ಇದಾಗಿದೆ.
ನಾವು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ ಅನೇಕ ಜನರು ಕಟ್ಟಡದಿಂದ ಹೊರಗೆ ಓಡುತ್ತಿರುವುದನ್ನು ಕಾಣಬಹುದು. ಒಟ್ಟು ಒಂದು ನಿಮಿಷ 30 ಸೆಕೆಂಡ್ಗಳ ವೀಡಿಯೋದಲ್ಲಿ 33 ಸೆಕೆಂಡ್ ನಿಂದ 37 ಸೆಕೆಂಡ್ ವರೆಗಿನ ಫ್ರೇಮ್ನಲ್ಲಿ ವ್ಯಕ್ತಿಯೊಬ್ಬರು ಕದ್ದ ವಸ್ತುಗಳನ್ನು ರಸ್ತೆಯಲ್ಲೇ ಇಟ್ಟು ಹೊಡೆಯುವುದರಿಂದ ತಪ್ಪಿಸಲು ಯತ್ನಿಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ಇನ್ನೊಂದು ಚೌಕಟ್ಟಿನಲ್ಲಿ ಕಟ್ಟಡದಿಂದ ಗಂಡಸರು ಮತ್ತು ಹೆಂಗಸರು ಹೊರಬರುವುದನ್ನು ನೋಡುತ್ತೇವೆ, ಸೈನಿಕರನ್ನು ಕಂಡ ಕೂಡಲೇ ಇವರು ಓಡಲು ಶುರು ಮಾಡುತ್ತಾರೆ.
ಪ್ರಾಥಮಿಕ ತನಿಖೆಯಲ್ಲಿ ಇದು ದರೋಡೆ ಪ್ರಕರಣವೆಂದು ಕಾಣುತ್ತದೆ. ನಾವು ವೈರಲ್ ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಇದೇ ವೀಡಿಯೊವನ್ನು ಹಲವಾರು ಬಾಂಗ್ಲಾದೇಶದ ಯೂಟ್ಯೂಬ್ ಚಾನಲ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಜೊತೆಗೆ ಬಾಂಗ್ಲಾದೇಶ ಮಿಲಿಟರಿ ಫೇಸ್ಬುಕ್ ಖಾತೆಯಲ್ಲಿ ಈ ಘಟನೆ ಕುರಿತು ಮಾಹಿತಿ ನೀಡಲಾಗಿದೆ.
BDMilitary/BDOSINT (Defence and Intelligence Observation) ಫೇಸ್ಬುಕ್ ಖಾತೆಯಲ್ಲಿ ಆಗಸ್ಟ್ 10, 2024 ರಂದು ಇದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ‘ಬಾಂಗ್ಲಾದೇಶ ಸೇನೆಯು ಲೂಟಿಕೋರರು ಮತ್ತು ಅವಕಾಶವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.’ ಎಂದು ಬರೆದುಕೊಂಡಿದೆ.
ಹಾಗೆಯೆ ಆಗಸ್ಟ್ 10, 2024 ರಂದು 'ಬಾಂಗ್ಲಾಧಾರ' ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಬಂಗಾಳಿ ಭಾಷೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘ದರೋಡೆ ಮಾಡುತ್ತಿದ್ದ ಜನರ ವಿರುದ್ಧ ಸೇನೆಯ ಕ್ರಮ’ ಎಂದು ಶೀರ್ಷಿಕೆ ನೀಡಲಾಗಿದೆ.
ಇನ್ನೊಂದು ಯೂಟ್ಯೂಬ್ ಚಾನಲ್‌ನಲ್ಲಿ ಕೂಡ ನಾವು ಇದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ, ಅದನ್ನು ಆಗಸ್ಟ್ 11, 2024 ರಂದು ಅಪ್‌ಲೋಡ್ ಮಾಡಲಾಗಿದೆ. ಇದಕ್ಕೆ ‘ಚಿತ್ತಗಂಗ್ನಲ್ಲಿ ಮನೆಯನ್ನು ಲೂಟಿ ಮಾಡಿದ ಸಂದರ್ಭ’ ಎಂಬ ಹೆಡ್ಲೈನ್ ನೀಡಲಾಗಿದೆ.
ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ನಾವು ಇನ್ನಷ್ಟು ಖಚಿತ ಮಾಹಿತಿಗಾಗಿ ಬಾಂಗ್ಲಾದೇಶದ ಫ್ಯಾಕ್ಟ್ ಚೆಕರ್ ತೌಸಿಫ್ ಅಕ್ಬರ್ ಅವರನ್ನು ಸಂಪರ್ಕಿಸಿದ್ದೇವೆ. ಆಗ ಅವರು ವೈರಲ್ ಆಗುತ್ತಿರುವ ವೀಡಿಯೊ ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧದ ಹಿಂಸಾಚಾರಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದರು. ''ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದರೋಡೆ ಮಾಡಿದ ವಸ್ತುಗಳೊಂದಿಗೆ ಓಡಿಹೋಗಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಬಳಿಕ ಸೈನಿಕರು ಆತನನ್ನು ಸುತ್ತುವರಿದಾಗ ಅದನ್ನು ಹಿಂದಿರುಗಿಸುವುದನ್ನು ಸಹ ಕಾಣಬಹುದು. ಬಾಂಗ್ಲಾದೇಶದ ಸೇನೆಯು ಹಿಂದೂಗಳನ್ನು ಅವರ ಮನೆಗಳಿಂದ ಹೊರಹಾಕುತ್ತಿದೆ ಎಂದು ವೈರಲ್ ಆಗುತ್ತಿರುವ ಸುದ್ದಿ ಸುಳ್ಳು,'' ಎಂದು ಅವರು ಹೇಳಿದ್ದಾರೆ.
ಹೀಗಾಗಿ ವೈರಲ್ ಆಗುತ್ತಿರುವ ವೀಡಿಯೊಲ್ಲಿ ಇರುವಂತೆ ಬಾಂಗ್ಲಾ ಸೈನಿಕರು ಹಿಂದೂಗಳನ್ನು ಮನೆಯಿಂದ ಹೊರಹಾಕುತ್ತಿಲ್ಲ. ಬದಲಾಗಿ ದರೋಡೆ ಮಾಡುತ್ತಿದ್ದ ಜನರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಎಂಬುದನ್ನು ನಾವು ಸ್ಪಷ್ಟ ಪಡಿಸುತ್ತೇವೆ.