ಭಾರತದಾದ್ಯಂತ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗನೊಬ್ಬ ಹಾಡು ಹಾಡುವ ವೀಡಿಯೊ ಹರಿದಾಡುತ್ತಿದ್ದು, ಈ ಮಗು ಹುತಾತ್ಮ ಸೇನಾಧಿಕಾರಿಯ ಮಗ ಎಂದು ಹೇಳಲಾಗುತ್ತಿದೆ. ಎಕ್ಸ್, ಫೇಸ್‌ಬುಕ್, ಯೂಟ್ಯೂಬ್ನಲ್ಲಿ ಅನೇಕರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಪ್ರಸಿದ್ಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಘ್ನೇಶ್ವರ ಎಂಬವರು ಆಗಸ್ಟ್ 14, 2024 ರಂದು ಈ ವೀಡಿಯೊ ಹಂಚಿಕೊಂಡಿದ್ದು, 'ತಂದೆ ಸೇನಾಧಿಕಾರಿ.... ಹುತಾತ್ಮರಾಗಿದ್ದಾರೆ. ತಂದೆಯ ಸಾವಿನ ಸುದ್ದಿ ಕೇಳಿ ತಾಯಿ ಮರಣ ಹೊಂದಿದಳು. ಕಣ್ಣೀರು ತಡೆದು ಎದೆಯುಬ್ಬಿಸಿ ನಿಂತಿದ್ದಾನೆ ದೇಶಪ್ರೇಮಿ ಮಗ' ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಕಿಡ್ಸ್ ವಿಸ್ತಾ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ವೀಡಿಯೊ ಅಪ್ಲೋಡ್ ಆಗಿದೆ. 'ಇವನು ಒಬ್ಬ ಸೇನಾ ಅಧಿಕಾರಿಯ ಮಗ, ಅವನ ತಂದೆ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ. ಈ ಸುದ್ದಿ ಕೇಳಿ ಆಘಾತದಿಂದ ತಾಯಿ ಸಾವನ್ನಪ್ಪಿದ್ದಾರೆ. ಇವನು ಬೋರ್ಡಿಂಗ್ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದಾನೆ. ತಂದೆಯ ಸಾವಿನ ಕಣ್ಣೀರಿನ ನಡುವೆ ಎಂತಹ ಆತ್ಮವಿಶ್ವಾಸ. ಮಗುವಿನ ಹಾಡು ನನ್ನ ಕಣ್ಣಲ್ಲಿ ನೀರು ತರಿಸಿತು' ಎಂದು ಬರೆದ ವೀಡಿಯೊ ಹಂಚಿಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ವೀಡಿಯೋದಲ್ಲಿರುವ ಹುಡುಗ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಸೇನಾಧಿಕಾರಿಯ ಮಗನಲ್ಲ, ಬದಲಿಗೆ ಪಾಕಿಸ್ತಾನ ಮೂಲದ ಬಾಲ ಕಲಾವಿದ ಗುಲಾಮ್ ಮುರ್ತಾಜಾ. ವಿಡಿಯೋದಲ್ಲಿ ಅವರು 2014ರ ಪೇಶಾವರ ಶಾಲೆಯ ಹತ್ಯಾಕಾಂಡಕ್ಕೆ ಗೌರವ ಸೂಚಿಸಿ ಹಾಡಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಡಿಸೆಂಬರ್ 19, 2015 ರಂದು ಸೈಬ್ಟೈನ್ ಟಿವಿ ಎಂದು ಯೂಟ್ಯೂಬ್ ಖಾತೆಯಲ್ಲಿ ಈ ವೀಡಿಯೊ ಅಪ್ಲೋಡ್ ಆಗಿರುವುದು ಕಂಡುಬಂತು. ಇದರಲ್ಲಿ 'ಬಾಬಾ ಮೇರೆ - ಪುಟ್ಟ ಮಗು ಗುಲಾಮ್ ಮುರ್ತಾಜಾ ಎಪಿಎಸ್ ದಾಳಿಯಲ್ಲಿ ಹುತಾತ್ಮರಾದವರಿಗಾಗಿ ಹಾಡಿದ್ದಾರೆ' ಎಂದು ಶೀರ್ಷಿಕೆ ನೀಡಲಾಗಿದೆ.
ಈ ಮೂಲಕ ಈ ವೀಡಿಯೊ ಪಾಕಿಸ್ತಾನದ್ದು ಎಂದು ಸುಳಿವು ನೀಡಿತು. ಈ ಮಾಹಿತಿ ತೆಗೆದುಕೊಂಡು ನಾವು 'ಬಾಬಾ ಮೇರೆ ಪ್ಯಾರೆ ಬಾಬಾ' (ಹಾಡಿನ ಶೀರ್ಷಿಕೆ) ಮತ್ತು 'ಪಾಕಿಸ್ತಾನಿ ಬಾಲ ಕಲಾವಿದ' ಎಂಬ ಪ್ರಮುಖ ಪದಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ನಡೆಸಿದ್ದೇವೆ. ಆಗ ದುನ್ಯಾ ನ್ಯೂಸ್ ಸೇರಿದಂತೆ ಹಲವಾರು ಪಾಕಿಸ್ತಾನಿ ಮಾಧ್ಯಮಗಳು ಇದೇ ರೀತಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಪೇಶಾವರ ಶಾಲೆಯ ಹತ್ಯಾಕಾಂಡಕ್ಕೆ ಗೌರವ ಎಂದು ಬರೆದುಕೊಂಡಿದೆ.
ಈ ಕುರಿತು ಹೆಚ್ಚುವರಿ ಮಾಹಿತಿಗಾಗಿ ಹುಡುಕಿದಾಗ, ನಮಗೆ ಗುಲಾಮ್ ಮುರ್ತಾಜಾ ಪಾಕಿಸ್ತಾನಿ ಗಾಯಕ ನದೀಮ್ ಅಬ್ಬಾಸ್ ಅವರ ಮಗ ಎಂದು ಕಂಡುಬಂದಿದೆ. ಜೊತೆಗೆ ಮುರ್ತಾಜಾ 2017ರ ಸೆಪ್ಟೆಂಬರ್ 21 ರಂದು ಫೇಸ್ಬುಕ್ನಲ್ಲಿ ಮಾಡಿರುವ ಪೋಸ್ಟ್ ಒಂದು ಕಂಡುಬಂತು. ಆಗ ಈ ಹಿಂದೆ ಕೂಡ ಇದೇರೀತಿಯ ಸುದ್ದಿ ವೈರಲ್ ಆಗಿದ್ದ ಬಗ್ಗೆ ಮಾಹಿತಿ ಸಿಕ್ಕಿತು. ಗುಲಾಮ್-ಎ-ಮುರ್ತಾಜಾ ಅವರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ತಮ್ಮ ತಂದೆ ಜೀವಂತವಾಗಿದ್ದಾರೆ. ನನ್ನ ತಂದೆ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ ಎಂದು ಹೇಳಿರುವುದು ಈ ಪೋಸ್ಟ್ನಲ್ಲಿದೆ.
ಇನ್ನು ಮುರ್ತಾಜಾ ಅವರ ತಂದೆ ನದೀಮ್ ಅಬ್ಬಾಸ್ ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ 2017ರ, ಡಿಸೆಂಬರ್ 16 ರಂದು ಈ ವೈರಲ್ ವೀಡಿಯೊ ಹಂಚಿಕೊಂಡಿದ್ದು, 'ನನ್ನ ಮಗ ಗುಲಾಮ್-ಎ-ಮುರ್ತಾಜಾ #ಬಾಬಮೆರೆಪ್ಯರೇಬಾಬಾ #ಶ್ರದ್ಧಾಂಜಲಿ #ಹಾಡನ್ನು #aps #ಪೇಶಾವರ್ #ದಾಳಿಗಾಗಿ ಹಾಡಿದ್ದಾನೆ' ಎಂದು ಬರೆದಿದ್ದಾರೆ.
ಈ ಮೂಲಕ ಸಾಮಾಜಿಕ ಜಾಣಗಳಲ್ಲಿ ವೈರಲ್ ಆಗುತ್ತಿರುವಂತೆ ಈ ಹಾಡು ಹಾಡುತ್ತಿರುವ ಯುವಕ ಹುತಾತ್ಮ ಸೇನಾಧಿಕಾರಿಯ ಮಗನಲ್ಲ ಎಂಬುದನ್ನು ನಾವು ಖಚಿತ ಪಡಿಸುತ್ತೇವೆ. ಅವರು ಪಾಕಿಸ್ತಾನದ ಗಾಯಕ ನದೀಮ್ ಅಬ್ಬಾಸ್ ಅವರ ಮಗ ಗುಲಾಮ್, ಹಾಗೂ ಇವರ ತಂದೆ ಇನ್ನೂ ಜೀವಂತವಾಗಿದ್ದಾರೆ.