ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯನ್ನು ಗೆದ್ದು ಭಾರತ ಕ್ರಿಕೆಟ್ ತಂಡ ತವರಿಗೆ ಮರಳಿದ್ದು, ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಇದರ ಜೊತೆಗೆ ಇವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಆದರೆ, ಆಟಗಾರರು ಮತ್ತು ಅಭಿಮಾನಿಗಳು ಇನ್ನೂ ಈ ಐತಿಹಾಸಿಕ ಜಯದ ಗುಂಗಿನಿಂದ ಹೊರಬಂದಿಲ್ಲ. ಪ್ರತಿದಿನ ಕೊಹ್ಲಿ, ರೋಹಿತ್, ಟೀಮ್ ಇಂಡಿಯಾ ಹೆಸರು ಟ್ರೆಂಡ್ ಆಗುತ್ತಲೇ ಇದೆ. ಇದರ ನಡುವೆ ವಿರಾಟ್ ಕೊಹ್ಲಿ ತಮ್ಮ ಕೈಯಲ್ಲಿ ತಾವು ಗೆದ್ದ ಮೂರು ಟ್ರೋಫಿಯನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ ಎಂಬ ಫೋಟೋ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ ಈವರೆಗೆ ಮೂರು ಐಸಿಸಿ ಟ್ರೋಫಿಯನ್ನು ಗೆದ್ದಿದ್ದಾರೆ. ಎಂಎಸ್ ಧೋನಿ ನಾಯಕತ್ವದಡಿಯಲ್ಲಿ 2011ರ ಏಕದಿನ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಟ್ರೋಫಿ ಮತ್ತು ಇತ್ತೀಚೆಗಷ್ಟೆ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಅಡಿಯಲ್ಲಿ ಟಿ20 ವಿಶ್ವಕಪ್ ಹೀಗೆ ಮೂರು ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರು. ಇದೀಗ ಈ ಮೂರು ಟ್ರೋಫಿಯನ್ನು ಕೊಹ್ಲಿ ತನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರೆ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಮಿತ್ ರಾಕ್ಸ್ ಎಂಬ ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು, ''ವಿರಾಟ್ ಕೊಹ್ಲಿ ಕೈಯಲ್ಲಿ ಹೊಸ ಟ್ಯಾಟೂ'' ಎಂಬ ಶೀರ್ಷಿಕೆ ಬರೆದು ಫೋಟೋವನ್ನು ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ಫೋಟೋ.
ಹಾಗೆಯೆ ಯೂಟ್ಯೂಬ್ನಲ್ಲಿ ಕೂಡ ಈ ಫೋಟೋ ವೈರಲ್ ಆಗುತ್ತಿದ್ದು, ಕ್ರಿಕೆಟ್ ಮೂಮೆಂಟ್ಸ್ ವಿಥ್ ಕಾರ್ತಿಕ್ (Cricket Moments With Kartik) ಎಂಬ ಚಾನೆಲ್ನಿಂದ ''ವಿರಾಟ್ ಕೊಹ್ಲಿ ಹೊಸ ಟ್ಯಾಟೂ ಕೈಯಲ್ಲಿ ಹಾಕಿಸಿಕೊಂಡಿದ್ದಾರೆ,'' ಎಂದು ಬರೆದು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ಫೋಟೋ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಈ ಫೋಟೋವನ್ನು ಪ್ರಸಿದ್ಧ ಕ್ರಿಕೆಟ್ ಸುದ್ದಿಯ ಡಿಜಿಟಲ್ ಮಾಧ್ಯಮ ಕ್ರಿಕೆಟ್ ಟ್ರ್ಯಾಕರ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ವೈರಲ್ ಫೋಟೋದ ನಿಜಾಂಶವನ್ನು ತಿಳಿಯಲು ನಾವು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಜುಲೈ 8 ರಂದು ಕ್ರಿಕೆಟ್ ಟ್ರ್ಯಾಕರ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಫೋಟೋ ಸಿಕ್ಕಿತು. ಈ ಫೋಟೋವನ್ನು ಸ್ವತಃ ಕ್ರಿಕೆಟ್ ಟ್ರ್ಯಾಕರ್ ಎಡಿಟ್ ಮಾಡಿ ಹಂಚಿಕೊಂಡಿದೆ. ಜೊತೆಗೆ, ''ಕ್ರಿಕೆಟಿಗರು ತಮ್ಮ ಐಸಿಸಿ ಟ್ರೋಫಿಗಳ ಹಚ್ಚೆಯನ್ನು ಹೆಮ್ಮೆಯಿಂದ ಪ್ರದರ್ಶಿಸುವುದನ್ನು ಕಲ್ಪಿಸಿಕೊಳ್ಳಿ. ನಿಮ್ಮ ನೆಚ್ಚಿನ ಕ್ರಿಕೆಟರ್ ಎಷ್ಟು ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದಾರೆ?,'' ಎಂದು ಬರೆದು ಕೊಹ್ಲಿ ತನ್ನ ಕೈ ಮೇಲೆ ಮೂರು ಟ್ರೋಫಿಯನ್ನು ಟ್ಯಾಟೂ ಹಾಕಿಸಿಕೊಂಡಂತಿರುವ ಫೋಟೋವನ್ನು ಹಂಚಿಕೊಂಡಿದೆ.
ಈ ಫೋಟೋದ ಮೂಲವನ್ನು ಹುಡುಕಿಕೊಂಡು ಹೋದಾಗ ನಮಗೆ ಸಿಕ್ಕಿದ್ದು, ಟಿ20 ವಿಶ್ವಕಪ್ಗು ಮುನ್ನ ನಡೆದ ಕೊಹ್ಲಿಯ ಫೋಟೋಶೂಟ್. ಪ್ರಸಿದ್ಧ ಸೋಷಿಯಲ್ ನೆಟ್ವರ್ಕ್ ರೆಡ್ಡಿಟ್ನಲ್ಲಿರುವ ಇಂಡಿಯಾ ಕ್ರಿಕೆಟ್ ಪೇಜ್ನಲ್ಲಿ ಈ ಫೋಟೋವನ್ನು ಜೂನ್ 3, 2024 ರಂದು ಅಪ್ಲೋಡ್ ಮಾಡಲಾಗಿದೆ. ''2024 ರ ಟಿ20 ವಿಶ್ವಕಪ್‌ಗಾಗಿ ವಿರಾಟ್ ಕೊಹ್ಲಿ ಫೋಟೋಶೂಟ್,'' ಎಂದು ಶೀರ್ಷಿಕೆ ನೀಡಲಾಗಿದೆ.
ಹಾಗೆಯೆ ಜೂನ್ 3, 2024 ರಂದು ಯಶ್ವಿ ಎಂಬ ಎಕ್ಸ್ ಬಳಕೆದಾರರು, ''ಟಿ20 ವಿಶ್ವಕಪ್ಗಿಂತ ಮುಂಚಿತವಾಗಿ ಕೊಹ್ಲಿಯ ಹೆಡ್‌ಶಾಟ್ಸ್, ಇವರು ಯಾವುದೇ ಜೆರ್ಸಿ ತೊಟ್ಟರೂ ಅದು ಅದ್ಭುತವಾಗಿ ಕಾಣುತ್ತದೆ,'' ಎಂದು ಬರೆದು ಈ ಫೋಟೋವನ್ನು ಶೇರ್ ಮಾಡಿದ್ದಾರೆ.
ನೈಜ್ಯ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೊಹ್ಲಿಯ ಕೈಯಲ್ಲಿ ಮೂರು ಟ್ರೋಫಿಯ ಯಾವುದೇ ಟ್ಯಾಟೂ ಇಲ್ಲ. ಹೀಗಾಗಿ ವಿರಾಟ್ ಕೊಹ್ಲಿ ತಾನು ಗೆದ್ದ ಮೂರು ಟ್ರೋಫಿಯನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂಬ ವೈರಲ್ ಫೋಟೋ ಸುಳ್ಳಾಗಿದೆ. ಇದನ್ನು ಕ್ರಿಕೆಟ್ ಟ್ರ್ಯಾಕರ್ ತಮಾಷೆಗೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಫೋಟೋ ಆಗಿದೆಯಷ್ಟೆ.