Kannada

Fact Check: ಬಾಂಗ್ಲಾದೇಶ ಹಳ್ಳಿಗಳಲ್ಲಿ ಮುಸ್ಲಿಮರಿಂದ ಹಿಂದೂಗಳ ಹತ್ಯೆ ಎಂಬ ವೀಡಿಯೊದ ನಿಜಾಂಶ ಏನು?

ಬಾಂಗ್ಲಾದೇಶದ ಹಳ್ಳಿಗಳಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ಬೆಂಕಿ ಹಚ್ಚಿ ಕೊಲ್ಲುತ್ತಿದ್ದಾರೆ ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

Vinay Bhat

ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದೀಗ ಕೋಲು-ದೊಣ್ಣೆಗಳನ್ನು ಹಿಡಿದಿರುವ ಜನರ ಗುಂಪು ಬೆಳೆಗಳು ಮತ್ತು ಆಸ್ತಿಗಳನ್ನು ನಾಶಪಡಿಸುತ್ತಿರುವುದನ್ನು ನೋಡಬಹುದಾದ ವೀಡಿಯೊ ವೈರಲ್ ಆಗಿದೆ. ಬಾಂಗ್ಲಾದೇಶದ ಹಳ್ಳಿಗಳಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ಬೆಂಕಿ ಹಚ್ಚಿ ಕೊಲ್ಲುತ್ತಿದ್ದಾರೆ ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದ ಮುಸ್ಲಿಮರು ಈಗ ಹಳ್ಳಿಗಳಲ್ಲಿ ಮತ್ತು ಬಾಂಗ್ಲಾದೇಶದ ದೂರದ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂಗಳನ್ನು ಕೊಲ್ಲುತ್ತಿದ್ದಾರೆ. ಹಿಂದೂಗಳ ಮನೆಗಳನ್ನು ಸುಡುವುದು, ಅವರ ಹೊಲಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇಸ್ಲಾಮಿಕ್ ದೇಗುಲವೊಂದರಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಎರಡು ಮುಸ್ಲಿಂ ಗುಂಪುಗಳ ನಡುವೆ ನಡೆದ ಗಲಾಟೆಯ ವೀಡಿಯೊ ಇದಾಗಿದೆ. ಈ ದಾಳಿಯಲ್ಲಿ ಯಾವುದೇ ಕೋಮುಕೋನವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಈ ಘಟನೆಗೆ ಸಂಬಂಧಿಸಿದ ಕೆಲವು ವರದಿಗಳು ನಮಗೆ ಸಿಕ್ಕಿವೆ. ಬಾಂಗ್ಲಾದೇಶದ ಸ್ಥಳೀಯ ಸುದ್ದಿ ಮಾಧ್ಯಮ ಬಾಂಗ್ಲಾ ಅಫೇರ್ಸ್ ನವೆಂಬರ್ 28, 2024ರಂದು ತನ್ನ ಯೂಟ್ಯೂಬ್‌ ಚಾನೆಲ್‌ ನಲ್ಲಿ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿದೆ. ಇದಕ್ಕೆ ‘‘ಶೇರ್ಪುರದಲ್ಲಿ ಶ್ರದ್ಧಾಕೇಂದ್ರಗಳ ಮೇಲೆ ದಾಳಿ, ಲೂಟಿ ಮತ್ತು ಬೆಂಕಿ ಹಚ್ಚಿರುವುದು’’ ಎಂಬ ಶೀರ್ಷಿಕೆ ನೀಡಿದೆ.

ಈ ವೀಡಿಯೊದ 0:50 ಸೆಕಂಡ್​ನ ಕ್ಲಿಪ್​ನಲ್ಲಿ ವೈರಲ್ ವೀಡಿಯೊವನ್ನು ಹೋಲುವ ದೃಶ್ಯಾವಳಿಗಳನ್ನು ನಾವು ಕಂಡಿದ್ದೇವೆ.

ಹಾಗೆಯೆ ಬಾಂಗ್ಲಾದೇಶ ಮತ್ತೊಂದು ಸುದ್ದಿ ಮಾಧ್ಯಮ ಜಮುನ ಟಿವಿ ಕೂಡ ತನ್ನ ಯೂಟ್ಯೂಬ್‌ ಚಾನೆಲ್​ನಲ್ಲಿ ನವೆಂಬರ್ 28, 2024ರಂದು ‘‘ಶೇರ್ಪುರ್ ದರ್ಬಾರ್ ಷರೀಫ್ ಧ್ವಂಸ ಮತ್ತು ಲೂಟಿ’’ ಎಂದ ಶೀರ್ಷಿಕೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಈ ವೀಡಿಯೊದ 1 ನಿಮಿಷ 8 ಸೆಕಂಡ್​ನ ಕ್ಲಿಪ್​ನಲ್ಲಿ ವೈರಲ್ ವೀಡಿಯೊವನ್ನು ಹೋಲುವ ದೃಶ್ಯಾವಳಿಗಳಿವೆ.

ಈ ವೀಡಿಯೊದ ವಿವರಣೆಯಲ್ಲಿ, ‘‘ಶೇರ್ಪುರ್ ಸದರ್‌ನಲ್ಲಿರುವ ದೋಜಾ ಪೀರ್‌ನ ದರ್ಬಾರ್‌ನಲ್ಲಿ ದಾಳಿ, ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ ಮುರ್ಷಿದ್‌ಪುರ ಗ್ರಾಮಸ್ಥರು ಸ್ಥಳೀಯ ಕ್ವಾಮಿ ಮದರಸಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜತೆಗೂಡಿ ದರ್ಬಾರ್ ಷರೀಫ್ ಮುಚ್ಚುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಂಗಳವಾರ ಗ್ರಾಮಸ್ಥರು ಪೀರನ ಹಿಂಬಾಲಕರೊಂದಿಗೆ ವಾಗ್ವಾದ ನಡೆಸಿದ್ದಾರೆ’’ ಎಂಬ ಮಾಹಿತಿ ಇದೆ.

ಈ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ಗಳನ್ನು ನಡೆಸಿದ್ದು ಈ ಘಟನೆಯ ಕುರಿತ ವರದಿಗಳನ್ನು ನೋಡಿದ್ದೇವೆ. ಢಾಕಾ ಟ್ರಿಬ್ಯೂನ್ 26 ನವೆಂಬರ್ 2024 ರಂದು, ‘‘ಶೇರ್ಪುರದ ಲಚ್ಮನ್‌ಪುರ ಪ್ರದೇಶದಲ್ಲಿ ಖ್ವಾಜಾ ಬದ್ರುದ್ದೀನ್ ಹೈದರ್ ನೇತೃತ್ವದ ಮುರ್ಷಿದ್‌ಪುರ್ ದರ್ಬಾರ್ ಷರೀಫ್ ಮೇಲೆ ನಡೆದ ವಿಧ್ವಂಸಕ ಮತ್ತು ಲೂಟಿಗೆ ಸಂಬಂಧಿಸಿದಂತೆ ಪೊಲೀಸರು ಏಳು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ದರ್ಬಾರ್ ನಲ್ಲಿ ಇಸ್ಲಾಂ ವಿರೋಧಿ ಚಟುವಟಿಕೆಗಳು ನಡೆದಿವೆ. ಸ್ಥಳೀಯ ಮದ್ರಸಾ ಶಿಕ್ಷಕರು ಮತ್ತು ನಿವಾಸಿಗಳ ಆರೋಪದ ನಂತರ ಈ ದಾಳಿ ನಡೆದಿದೆ. ಸುಮಾರು 400-500 ಜನರು ಸೈಟ್‌ಗೆ ನುಗ್ಗಿದ್ದು, ಬೇಲಿಗಳನ್ನು ಮುರಿದು ಆಸ್ತಿಯನ್ನು ಹಾನಿಗೊಳಿಸಿದ್ದಾರೆ’’ ಎಂದು ವರದಿ ಮಾಡಿದೆ.

ನವೆಂಬರ್ 28, 2024ರ ದಿ ಡೈಲಿ ಸ್ಟಾರ್ ಇದೇ ವೈರಲ್ ವೀಡಿಯೊಕ್ಕೆ ಹೋಲುವ ಫೋಟೋವನ್ನು ಹಂಚಿಕೊಂಡು ವರದಿ ಮಾಡಿದೆ. ‘‘ಶೇರ್ಪುರ್ ಸದರ್ ಉಪಜಿಲ್ಲೆಯಲ್ಲಿರುವ ಮುರ್ಷಿದ್‌ಪುರ್ ದರ್ಬಾರ್ ಷರೀಫ್ ಎಂದೂ ಕರೆಯಲ್ಪಡುವ ದೋಜಾ ಪಿರೇರ್ ದರ್ಬಾರ್ ಮೇಲೆ ನೂರಕ್ಕೂ ಹೆಚ್ಚು ಜನರ ಗುಂಪೊಂದು ನಿನ್ನೆ ಮತ್ತೊಮ್ಮೆ ದಾಳಿ ಮಾಡಿದೆ. ಇದು ಮೂರು ದಿನಗಳಲ್ಲಿ ಶ್ರದ್ಧಾಕೇಂದ್ರದ ಮೇಲೆ ಎರಡನೇ ದಾಳಿಯಾಗಿದೆ. ಮಂಗಳವಾರ, ಶ್ರದ್ಧಾಕೇಂದ್ರದ ಮೇಲೆ ನಡೆದ ದಾಳಿಯ ನಂತರ ಘರ್ಷಣೆ ಸಂಭವಿಸಿತು, ಇದರ ಪರಿಣಾಮವಾಗಿ ಒಬ್ಬರು ಸಾವನ್ನಪ್ಪಿದರು. ನಿನ್ನೆಯ ದಾಳಿಯು ಸುಮಾರು ಮೂರು ಗಂಟೆಗಳ ಕಾಲ ಮುಂದುವರೆಯಿತು, ಈ ಸಮಯದಲ್ಲಿ ಜನಸಮೂಹವು ಶ್ರದ್ಧಾಕೇಂದ್ರದ ಲೂಟಿ ಮಾಡಿ ಸುಟ್ಟುಹಾಕಿತು’’ ಎಂದಿದೆ.

ಹೀಗಾಗಿ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರಕ್ಕೂ ಈ ದಾಳಿಗೂ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಬಾಂಗ್ಲಾದೇಶದ ಶೇರ್ಪುರದಲ್ಲಿ ಮುಸ್ಲಿಂ ಸಮುದಾಯದೊಳಗಿನ ಎರಡು ಗುಂಪುಗಳ ನಡುವಿನ ಗಲಾಟೆಯ ವೀಡಿಯೊ ಆಗಿದೆ. ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಕೋಮು ಕೋನದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

Fact Check: Joe Biden serves Thanksgiving dinner while being treated for cancer? Here is the truth

Fact Check: അസദുദ്ദീന്‍ ഉവൈസി ഹനുമാന്‍ വിഗ്രഹത്തിന് മുന്നില്‍ പൂജ നടത്തിയോ? വീഡിയോയുടെ സത്യമറിയാം

Fact Check: சென்னை சாலைகளில் வெள்ளம் என்று வைரலாகும் புகைப்படம்?உண்மை அறிக

Fact Check: ಪಾಕಿಸ್ತಾನ ಸಂಸತ್ತಿಗೆ ಕತ್ತೆ ಪ್ರವೇಶಿಸಿದೆಯೇ? ಇಲ್ಲ, ಈ ವೀಡಿಯೊ ಎಐಯಿಂದ ರಚಿತವಾಗಿದೆ

Fact Check: శ్రీలంక వరదల్లో ఏనుగు కుక్కని కాపాడుతున్న నిజమైన దృశ్యాలా? కాదు, ఇది AI-జనరేటెడ్ వీడియో