Kannada

Fact Check: ಢಾಕಾದಲ್ಲಿ ಮುಸ್ಲಿಂ ವ್ಯಕ್ತಿಯಿಂದ ಹಿಂದೂ ಯುವತಿಗೆ ಚೂರಿಯಿಂದ ಇರಿಯಲಾಗಿದೆಯೇ? ಸುಳ್ಳು, ಸತ್ಯ ಇಲ್ಲಿದೆ

ಬಾಂಗ್ಲಾದೇಶದ ಢಾಕಾದಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ ಹಿಂದೂ ಯುವತಿಗೆ ಚೂರಿಯಿಂದ ಇರಿದಿದ್ದಾನೆ ಎಂದು ಈ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

vinay bhat

ಶಾಲಾ ಸಮವಸ್ತ್ರ ಧರಿಸಿರುವ ಯುವತಿಯೊಬ್ಬಳಿಗೆ ಯುವಕನೊಬ್ಬ ಹಲವು ಬಾರಿ ಚೂರಿಯಿಂದ ಇರಿಯುತ್ತಿರುವ ಆತಂಕಕಾರಿ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಬಾಂಗ್ಲಾದೇಶದ ಢಾಕಾದಲ್ಲಿ ಮುಸ್ಲಿಂ ಯುವಕನೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ ಹಿಂದೂ ಯುವತಿಗೆ ಚೂರಿಯಿಂದ ಇರಿದಿದ್ದಾನೆ ಎಂದು ಈ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ಢಾಕಾದ ಬೀದಿಗಳಲ್ಲಿ, ಒಬ್ಬ ಮುಸ್ಲಿಂ ವ್ಯಕ್ತಿಯ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕೆ ಹಿಂದೂ ಯುವತಿಯೊಬ್ಬಳು ಕ್ರೂರ ಹಿಂಸಾಚಾರವನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ತಮ್ಮನ್ನು ತಾವು ಮಹಿಳಾ ಹಕ್ಕುಗಳ ರಕ್ಷಕರೆಂದು ಕರೆದುಕೊಳ್ಳುವವರು ಎಲ್ಲಿದ್ದಾರೆ? ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವು ಖಂಡನಾರ್ಹವಾಗಿದೆ; ಈ ಸಂದರ್ಭದಲ್ಲಿ ಮೌನ ವಹಿಸುವುದು ಸರಿಯಲ್ಲ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿರುವುದು ನಿಜ. ಆದರೆ, ಸಂತ್ರಸ್ತ ಯುವತಿ ಹಿಂದೂ ಅಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೊದ ವಿವಿಧ ಫ್ರೇಮ್‌ಗಳನ್ನು ಬಳಸಿ ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ನವೆಂಬರ್ 9ರಂದು ಪ್ರಕಟವಾದ ದಿ ಡೈಲಿ ಸನ್ ವರದಿಯೊಂದು ನಮಗೆ ಲಭ್ಯವಾಯಿತು. ಈ ವರದಿಯಲ್ಲಿ ವೈರಲ್ ವಿಡಿಯೊದ ಸ್ಕ್ರೀನ್‌ಶಾಟ್ ಕೂಡ ಪ್ರಕಟಿಸಲಾಗಿತ್ತು.

ವರದಿಯ ಪ್ರಕಾರ, ನವೆಂಬರ್ 9ರಂದು ಕುಷ್ಟಿಯಾದಲ್ಲಿ ಈ ಘಟನೆ ನಡೆದಿದೆ. ಕುಷ್ಟಿಯಾ ಮಿಷನ್ ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ 16 ವರ್ಷದ ಜಾಕಿಯಾ ಸುಲ್ತಾನಾ ಎಂಬ ಯುವತಿಗೆ ಆಕೆಯ ಮನೆಯ ಹೊರಗೆ ಇಮೋನ್ ಎಂಬ ಯುವಕ ಚೂರಿಯಿಂದ ಇರಿದಿದ್ದನು.

ಮತ್ತಷ್ಟು ಹುಡುಕಾಟ ನಡೆಸಿದಾಗ ದಿ ಡೈಲಿ ಸ್ಟಾರ್, ಜಾಗೋ ನ್ಯೂಸ್ 24, ಜುಗಾಂತರ್ ಸೇರಿದಂತೆ ಬಾಂಗ್ಲಾದೇಶದ ಇತರ ಸುದ್ದಿ ಮಾಧ್ಯಮಗಳ ವರದಿಗಳೂ ಲಭ್ಯವಾದವು. ಈ ವರದಿಗಳಲ್ಲಿ ಸಂತ್ರಸ್ತ ಯುವತಿಯನ್ನು ಜಕಾರಿಯಾ ಮತ್ತು ಸುಮಿ ಅಖ್ತರ್ ಅವರ ಪುತ್ರಿ ಜಾಕಿಯಾ ಸುಲ್ತಾನಾ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಶಾಲೆಯಲ್ಲಿ ನಡೆದ ಆಯ್ಕೆ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ಜಾಕಿಯಾ, ಮನೆಯ ಗೇಟ್ ತೆರೆಯುವುದಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಇಮೋನ್ ಆಕೆಯ ಮೇಲೆ ಹಲವು ಬಾರಿ ಚೂರಿಯಿಂದ ಹಲ್ಲೆ ನಡೆಸಿದ್ದನು. ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಾಕಿಯಾ ಅವರ ತಾಯಿಯ ಪ್ರಕಾರ, ಇಮೋನ್ ಸ್ವಲ್ಪ ಸಮಯದಿಂದ ಆಕೆಯ ಮಗಳಿಗೆ ಕಿರುಕುಳ ನೀಡುತ್ತಿದ್ದನು. ಇಬ್ಬರೂ ಒಂದೇ ಕೋಚಿಂಗ್ ಕೇಂದ್ರದಲ್ಲಿ ಓದುತ್ತಿದ್ದರು. ಇಮೋನ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಜಾಕಿಯಾ ಕುಟುಂಬದವರು ಆತನ ಪೋಷಕರಿಗೆ ಮಾಹಿತಿ ನೀಡಿದ ಬಳಿಕ ಆತ ಕಿರುಕುಳ ನೀಡುವುದನ್ನು ನಿಲ್ಲಿಸಿದ್ದನು. ಕುಟುಂಬದವರ ದೂರಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರಬಹುದು ಎಂದು ಅವರು ಶಂಕಿಸಿದ್ದಾರೆ.

ಪೊಲೀಸರು ಇಮೋನ್‌ನನ್ನು ಬಂಧಿಸಿದ್ದು, ಆತನನ್ನು ಕುಷ್ಟಿಯಾದ ಪೂರ್ವ ಮೊಜಾಂಪುರ ಪ್ರದೇಶದ ಅಬ್ಬಾಸ್ ಉದ್ದೀನ್ ಅಲಿ ಅವರ ಪುತ್ರ ಎಂದು ಗುರುತಿಸಲಾಗಿದೆ. ಆತ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದನೆಂದು ವರದಿಯಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಢಾಕಾದಲ್ಲಿ ಮುಸ್ಲಿಂ ವ್ಯಕ್ತಿಯ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕೆ ಹಿಂದೂ ಯುವತಿಯೊಬ್ಬಳಿಗೆ ಹಿಂಸಾಚಾರ ನಡೆಸಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದರಲ್ಲಿ ಯಾವುದೇ ಕೋಮುಕೋನವಿಲ್ಲ.

Fact Check: Muslim youth attacks Hindu schoolgirl in Bangladesh? No, here are the facts.

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: கொளத்தூர் தவெக எம்.எல்.ஏ வி.எஸ்.பாபு உடல்நலம் பெற்று வீடு திரும்பியதாகப் பரவும் செய்தி? உண்மை என்ன

Fact Check: భారత స్వదేశీ బుల్లెట్ రైలు వీడియో? కాదు, ఇది తైవాన్‌కు చెందినది

Fact Check: Priyanka Gandhi’s security disrespects CM Revanth Reddy? No, here are the facts