ಕಳೆದ ವಾರ ನೇಪಾಳ-ಟಿಬೆಟ್ ಗಡಿಯಲ್ಲಿ ಭಾರಿ ತೀವ್ರತೆಯ ಭೂಕಂಪ ಆಗಿದೆ. ಸುಮಾರು 7.1 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಘಟನೆಯ ನಂತರ, ಕಂಪನದಿಂದಾಗಿ ರಸ್ತೆಬದಿಯ ಮನೆ ಕುಸಿಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಇತ್ತೀಚೆಗೆ ಟಿಬೆಟ್ನಲ್ಲಿ ಸಂಭವಿಸಿದ ಭೂಕಂಪದ ದೃಶ್ಯ ಎಂದು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಟಿಬೆಟ್‌ನಲ್ಲಿ ಭೀಕರ ಭೂಕಂಪ, ಸಾವಿನ ಸಂಖ್ಯೆ 126, ಸುಮಾರು 200 ಮಂದಿ ಗಾಯಗೊಂಡಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇತ್ತೀಚೆಗೆ ಟಿಬೆಟ್ನಲ್ಲಿ ಸಂಭವಿಸಿದ ಭೂಕಂಪಕ್ಕೂ ಈ ವೈರಲ್ ವೀಡಿಯೊಕ್ಕೂ ಯಾವುದೇ ಸಂಬಂಧವಿಲ್ಲ. ಬದಲಿಗೆ, ಈ ವೀಡಿಯೊ 2024ರ ಜನವರಿಯಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದ ದೃಶ್ಯವಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲು ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಅವುಗಳನ್ನು ಗೂಗಲ್ ಲೆನ್ಸ್‌ನೊಂದಿಗೆ ಹುಡುಕಿದೆವು. ಆಗ ನಾವು ಈ ಚಿತ್ರವನ್ನು ಅನೇಕ ಸುದ್ದಿ ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಂಡುಕೊಂಡಿದ್ದೇವೆ. ವೈರಲ್ ವೀಡಿಯೊವನ್ನು ಫೆಬ್ರವರಿ 5, 2024 ರಂದು ಜಪಾನ್ ಮೂಲದ ಸುದ್ದಿ ಮಾಧ್ಯಮ Nippon TV News 24 Japan ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಸಿಕ್ಕಿದೆ. ಇದಕ್ಕೆ ‘‘ಜನವರಿ 1 ರಂದು ಇಶಿಕಾವಾ ಪ್ರಾಂತ್ಯವನ್ನು 7.6 ತೀವ್ರತೆಯ ಪ್ರಬಲ ಭೂಕಂಪವು ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆ’’ ಎಂದು ಬರೆಯಲಾಗಿದೆ.
ಹಾಗೆಯೆ ಜಪಾನೀ ಸುದ್ದಿ ವೆಬ್‌ಸೈಟ್ hokkoku.jp ನಲ್ಲಿ ಕೂಡ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಸುದ್ದಿ ಪ್ರಕಟಿಸಿರುವುದು ನಾವು ಕಂಡಿದ್ದೇವೆ. ಫೆಬ್ರವರಿ 2, 2024 ರಂದು ಪ್ರಕಟವಾದ ಸುದ್ದಿಯ ಪ್ರಕಾರ, ‘‘ಇದು ಇಶಿಕಾವಾ ಪ್ರಿಫೆಕ್ಚರ್‌ನ ತಕಡಾಟೆಚೊ ನಗರದಿಂದ ಬಂದಿದೆ. ಭೂಕಂಪದ ನಂತರ ಜನರನ್ನು ಡೇ ಕೇರ್ ಸೆಂಟರ್‌ಗೆ ಕರೆದೊಯ್ಯುವ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ರಾಷ್ಟ್ರೀಯ ಮಾರ್ಗ 249 ರಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಕಂಪನಕ್ಕೆ ಒಳಗಾಗಿ ಮನೆಗಳು ಕುಸಿದು ಬೀಳುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ’’ ಎಂದು ಬರೆಯಲಾಗಿದೆ.
ವೈರಲ್ ವೀಡಿಯೊವನ್ನು ಹಂಚಿಕೊಂಡು ಇದು ಜಪಾನ್‌ನಲ್ಲಿ ಸಂಭವಿಸಿರುವ ಭೂಕಂಪ ಎಂದು ಕೆಲ ಮಾಧ್ಯಮ ವರದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಜನವರಿ 1, 2024 ರಂದು ಜಪಾನಿನಲ್ಲಿ ಸಂಭವಿಸಿದ ಭೂಕಂಪವನ್ನು ಜನವರಿ 7, 2025 ರಂದು ಚೀನಾ-ಟಿಬೆಟ್ ಭೂಕಂಪಕ್ಕೆ ಲಿಂಕ್ ಮಾಡಿ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.