ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ. ಮಹಿಳೆಯರ ಸುರಕ್ಷತೆಗಾಗಿ ರಾತ್ರಿ ವೇಳೆ ಪೊಲೀಸರು ಉಚಿತ ಪ್ರಯಾಣ ಯೋಜನೆ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಯಾವುದೇ ಮಹಿಳೆ ಮನೆಗೆ ಹೋಗಲು ಪೊಲೀಸ್ ಸಹಾಯವಾಣಿ ಸಂಖ್ಯೆ 1091 ಮತ್ತು 7837018555 ಗೆ ಕರೆ ಮಾಡಬಹುದು. ಪೊಲೀಸ್ ವಾಹನವು ಮಹಿಳೆಯನ್ನು ಸುರಕ್ಷಿತವಾಗಿ ಅವರ ಮನೆಗೆ ಕರೆದೊಯ್ಯುತ್ತದೆ. ಮಹಿಳೆಯರು ಈ ಸಹಾಯವಾಣಿ ಸಂಖ್ಯೆಗಳಿಗೆ 24X7 ಕರೆ ಮಾಡಬಹುದು. ದೇಶದಲ್ಲಿ ಎಲ್ಲ ಭಾಗಗಳಲ್ಲಿ ಈ ಸೇವೆಯನ್ನು ಜಾರಿಗೊಳಿಸಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಿಕೊಳ್ಳಲಾಗುತ್ತಿದೆ.
ವೆಂಕಿ ವೆಂಕಟ್ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಆಗಸ್ಟ್ 22 ರಂದು ಈ ಕುರಿತು ಪೋಸ್ಟ್ ಮಾಡಿದ್ದು, ‘ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯೊಳಗೆ ಮನೆಗೆ ತೆರಳಲು ವಾಹನ ಸಿಗದೇ ಒಂಟಿಯಾಗಿರುವ ಯಾವುದೇ ಮಹಿಳೆ ಪೊಲೀಸ್ ಸಹಾಯವಾಣಿ ಸಂಖ್ಯೆಗಳನ್ನು (1091 ಮತ್ತು 7837018555) ಸಂಪರ್ಕಿಸಬಹುದಾದ ಉಚಿತ ಪ್ರಯಾಣ ಯೋಜನೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ. ವಾಹನವನ್ನು ಕೋರಬಹುದು ಮತ್ತು ವಿನಂತಿಸಬಹುದು. ಅವರು 24x7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ ಪಿಸಿಆರ್ ವಾಹನ/ಎಸ್‌ಎಚ್‌ಒ ವಾಹನವು ಅವನನ್ನು ಸುರಕ್ಷಿತವಾಗಿ ಅವನ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು. ನಿಮಗೆ ತಿಳಿದಿರುವ ಎಲ್ಲರಿಗೂ ಈ ಸಂದೇಶವನ್ನು ಹರಡಿ. ನಿಮ್ಮ ಹೆಂಡತಿ, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ. ಅದನ್ನು ಉಳಿಸಲು ಅವರನ್ನು ಕೇಳಿ.. ಎಲ್ಲಾ ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರೊಂದಿಗೆ ಹಂಚಿಕೊಳ್ಳಿ. ತುರ್ತು ಸಂದರ್ಭಗಳಲ್ಲಿ ಮಹಿಳೆಯರು *ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್* ನೀಡಬಹುದು. ಇದರಿಂದ ಪೊಲೀಸರು ನಿಮ್ಮ ಸ್ಥಳವನ್ನು ಪತ್ತೆ ಹಚ್ಚಬಹುದು ಮತ್ತು ನಿಮಗೆ ಸಹಾಯ ಮಾಡಬಹುದು. ಭಾರತದಾದ್ಯಂತ ಅನ್ವಯಿಸುತ್ತದೆ’ ಎಂದು ಬರೆದಿದ್ದಾರೆ.
ಅದೇರೀತಿ ವಾಟ್ಸ್ಆ್ಯಪ್ನ ಅನೇಕ ಗ್ರೂಪ್ಗಳಲ್ಲಿ ಇದೇರೀತಿಯ ಸಂದೇಶ ವೈರಲ್ ಆಗುತ್ತಿದೆ. ನೀವಿಲ್ಲಿ ವಾಟ್ಸ್ಆ್ಯಪ್ ಗ್ರೂಪ್ನ ಸ್ಕ್ರೀನ್ ಶಾಟ್ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಇದು ಸುಳ್ಳು ಮಾಹಿತಿ ಎಂಬುದು ಕಂಡುಬಂದಿದೆ. ವೈರಲ್ ಪೋಸ್ಟ್ನಲ್ಲಿರುವ ಮೊಬೈಲ್ ನಂಬರ್ ಗೂಗಲ್ ಸರ್ಚ್ನಲ್ಲಿ ಹಾಕಿದಾಗ ಇದು ಪಂಜಾಬ್ ಪ್ರಾಂತ್ಯದ ಲುಧಿಯಾನ ಪೊಲೀಸ್ ಠಾಣೆಯದ್ದಾಗಿದೆ ಎಂಬುದು ತಿಳಿದುಬಂತು.
ಲುಧಿಯಾನ ಪೊಲೀಸ್ ಠಾಣೆ ಮತ್ತು ಈ ನಂಬರ್ ಬಗ್ಗೆ ಗೂಗಲ್ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ ನಮಗೆ ಇನ್ನಷ್ಟು ಮಾಹಿತಿ ಸಿಕ್ಕಿದೆ. ಈ ಕುರಿತು ಡಿಸೆಂಬರ್ 1, 2019 ರಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ‘ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು, ಲುಧಿಯಾನ ಪೊಲೀಸರು ಸಂಜೆ ತಡವಾಗಿ ಅಥವಾ ರಾತ್ರಿಯಲ್ಲಿ ಕ್ಯಾಬ್ ಪಡೆಯಲು ಸಾಧ್ಯವಾಗದ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸಿದ್ದಾರೆ. ಮಹಿಳೆಯರು ಪೊಲೀಸ್ ಸಹಾಯವಾಣಿ ಸಂಖ್ಯೆ 1091 ಮತ್ತು 7837018555 ಗೆ ಕರೆ ಮಾಡುವ ಮೂಲಕ ವಾಹನಕ್ಕಾಗಿ ವಿನಂತಿಸಬಹುದು. ಪೊಲೀಸ್ ವಾಹನವು ಅವರನ್ನು ಉಚಿತವಾಗಿ ಡ್ರಾಪ್ ಮಾಡುತ್ತದೆ ಎಂದು ಪೊಲೀಸ್ ಆಯುಕ್ತ ರಾಕೇಶ್ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.’ ಎಂದು ವರದಿಯಲ್ಲಿದೆ.
ದಿ ಟ್ರಿಬ್ಯೂನ್ ಮತ್ತು ನ್ಯೂಸ್ 18 ನ ವೆಬ್‌ಸೈಟ್‌ಗಳಲ್ಲಿ ಕೂಡ ಇದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನಾವು ಕಂಡುಕೊಂಡಿದ್ದೇವೆ. 2 ಡಿಸೆಂಬರ್ 2019 ರಂದು ಪ್ರಕಟವಾದ ವರದಿಗಳ ಪ್ರಕಾರ, ಲುಧಿಯಾನ ಪೊಲೀಸರು ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ಆದರೆ, ಈಗ ಲುಧಿಯಾದ ಪೊಲೀಸರು ಈ ಸೇವೆಯನ್ನು ನಿಲ್ಲಿಸಿದ್ದಾರೆ ಎಂದು ನಮ್ಮ ಮೂಲಗಳು ಖಚಿತಪಡಿಸುತ್ತವೆ.
ಹಾಗೆಯೆ ಈ ಸುಳ್ಳು ಸುದ್ದಿಯ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕೂಡ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಆಗಸ್ಟ್ 22, 2024 ರಂದು ಎಚ್ಚರಿಕೆ ನೀಡಿದೆ. ‘ಎಚ್ಚರವಾಗಿರಿ!! ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನಿಯಂತ್ರಣ ಕೊಠಡಿಗೆ ಕರೆ ಮಾಡಿದಲ್ಲಿ, ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಮೆಸೇಜ್ ಹರಿದಾಡುತ್ತಿದ್ದು, ಇದು ಸುಳ್ಳು. ಇಂತಹ ಸುಳ್ಳು ಮೆಸೇಜ್ ನಂಬಬೇಡಿ. ತುರ್ತು ಪರಿಸ್ಥಿತಿಯಲ್ಲಿ ನಮ್ಮ 112 ಸಹಾಯವಾಣಿಗೆ ಕರೆಮಾಡಿ ನೆರವು ಪಡೆಯಿರಿ.’ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಲುಧಿಯಾನದಲ್ಲಿ ಈ ಸೇವೆಯನ್ನು ಪ್ರಾರಂಭಿಸಿದಾಗಿನಿಂದ, ಈ ಮೊಬೈಲ್ ನಂಬರ್ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಾಗಿ ವಿವಿಧ ನಗರಗಳ ಹೆಸರಿನಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು, ಗುಜರಾತ್, ಕೇರಳ, ತೆಲಂಗಾಣ ಮತ್ತು ಇಂದೋರ್ ಹೆಸರಲ್ಲೂ ಈ ಸಂಖ್ಯೆ ವೈರಲ್ ಆಗಿದೆ.
ಹೀಗಾಗಿ 'ಪೊಲೀಸರಿಂದ ರಾತ್ರಿ ಮಹಿಳೆಯರಿಗೆ ಉಚಿತ ಪ್ರಯಾಣ' ಹೆಸರಿನಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸುಳ್ಳು ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ. ಪೋಸ್ಟ್‌ನಲ್ಲಿ ನೀಡಲಾಗಿರುವ ಮೊಬೈಲ್ ಸಂಖ್ಯೆ ಲುಧಿಯಾನ ಪೊಲೀಸ್ ನೀಡಿದ್ದಾಗಿದೆ. ಡಿಸೆಂಬರ್ 2019 ರಲ್ಲಿ ಇದನ್ನು ಪ್ರಾರಂಭಿಸಿದರು. ಆದರೆ ನಂತರ ಈ ಸಂಖ್ಯೆಯನ್ನು ನಿಲ್ಲಿಸಲಾಯಿತು. ಹಾಗೆಯೆ, ಎರಡನೇ ಸಂಖ್ಯೆ 1091 ಮಹಿಳಾ ಸಹಾಯವಾಣಿಯಾಗಿದೆ.