Kannada

Fact Check: ದೆಹಲಿಯಲ್ಲಿ ಮಳೆಯ ನಡುವೆಯೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ? ಇಲ್ಲ, ಇದು ಹಳೆಯ ವಿಡಿಯೊ

ದೆಹಲಿಯಲ್ಲಿ ಮಳೆಯನ್ನೂ ಲೆಕ್ಕಿಸದೆ ಜಂತರ್‌ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆದಿದೆ ಎಂದು ಕೆಲವರು ಈ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

vinay bhat

ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರ ನಡುವೆ ಸ್ಪೆಷಲ್ ಇಂಟೆನ್ಸಿವ್ ರಿವಿಷನ್ (SIR) ಸೇರಿದಂತೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಹಲವು ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆ ನಡೆಸಿವೆ. ಈ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಹಲವು ಮಂದಿ ಪ್ರತಿಭಟನೆ ನಡೆಸುತ್ತಿರುವುದು ಕಾಣಿಸುತ್ತದೆ. ದೆಹಲಿಯಲ್ಲಿ ಮಳೆಯನ್ನೂ ಲೆಕ್ಕಿಸದೆ ಜಂತರ್‌ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆದಿದೆ ಎಂದು ಕೆಲವರು ಈ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಅಪ್ಲೋಡ್ ಮಾಡಿ, ‘‘ದಿಲ್ಲಿಯಲ್ಲಿ ಭಾರೀ ಮಳೆಯ ನಡುವೆಯೂ ಪ್ರತಿಭಟನೆ. ಇವಿಎಂ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಘೋಷಣೆ. ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ಉಳಿಸಿ ಎಂದು ಘೋಷಣೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ದೆಹಲಿಯ ಜಂತರ್‌ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆದಿರುವುದು ನಿಜ. ಆದರೆ, ವೈರಲ್ ಆಗಿರುವ ವಿಡಿಯೊ 2024ರ ಜನವರಿಯಲ್ಲಿ ನಡೆದ ಪ್ರತಿಭಟನೆಯದ್ದು. ಆ ಸಂದರ್ಭದಲ್ಲಿ ಹಲವು ಸಂಘಟನೆಗಳು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ (EVM) ವಿರುದ್ಧ ಪ್ರತಿಭಟನೆ ನಡೆಸಿದ್ದವು.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್‌ನಲ್ಲಿ ಹುಡುಕಾಟ ನಡೆಸಿದಾಗ, ಈ Adv.Sujeet Pasi ಎಂಬ ಎಕ್ಸ್ ಬಳಕೆದಾರರು ಇದೇ ವಿಡಿಯೊದ ತುಣುಕನ್ನು 2024ರ ಫೆಬ್ರುವರಿ 1ರಂದು ಹಂಚಿಕೊಂಡಿರುವುದು ಕಂಡುಬಂದಿದೆ. ಅವರು ಇದನ್ನು ಇವಿಎಂ ವಿರುದ್ಧ ನಡೆದ ಪ್ರತಿಭಟನೆಯ ವಿಡಿಯೊ ಎಂದು ಹೇಳಿದ್ದರು.

ಹಾಗೆಯೆ ಮತ್ತೊಂದು ಫೇಸ್‌ಬುಕ್ ಬಳಕೆದಾರರೂ 2024ರ ಜನವರಿ 31ರಂದು ಇದೇ ವಿಡಿಯೊವನ್ನು ಅಪ್‌ಲೋಡ್ ಮಾಡಿದ್ದರು. ದೆಹಲಿಯ ಜಂತರ್‌ಮಂತರ್‌ನಲ್ಲಿ ಇವಿಎಂ ವಿರುದ್ಧ ನಡೆದ ಪ್ರತಿಭಟನೆಯ ವಿಡಿಯೊ ಇದಾಗಿದ್ದು, ಪ್ರತಿಭಟನೆ ನಡೆದ ದಿನಾಂಕ ಜನವರಿ 31, 2024 ಎಂದು ಅವರು ನಮೂದಿಸಿದ್ದರು. ಇದರಿಂದ ವೈರಲ್ ಆಗಿರುವ ವಿಡಿಯೊ ಹಳೆಯದು ಎಂಬುದು ಸ್ಪಷ್ಟವಾಗಿದೆ.

ಅಮರ್ ಉಜಾಲಾ ವೆಬ್‌ಸೈಟ್‌ನಲ್ಲಿ 2024ರ ಜನವರಿ 31ರಂದು ಪ್ರಕಟವಾದ ವರದಿಯ ಪ್ರಕಾರ, ಇವಿಎಂ ವಿರುದ್ಧ ಜಂತರ್‌ಮಂತರ್‌ನಲ್ಲಿ ಭಾರತ್ ಮುಕ್ತಿ ಮೋರ್ಚಾ, ರಾಷ್ಟ್ರೀಯ ಕಿಸಾನ್ ಮೋರ್ಚಾ, ಬಹುಜನ ಮುಕ್ತಿ ಪಾರ್ಟಿ ಸೇರಿದಂತೆ 22 ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಹುಡುಕಾಟದ ಸಂದರ್ಭ, ಡಿಸಿಪಿ ನ್ಯೂ ಡೆಲ್ಲಿಯ ಅಧಿಕೃತ ಎಕ್ಸ್ ಖಾತೆ ಕೂಡ ಈ ವಿಡೊಯೊ ಹಳೆಯದು ಎಂದು ಹೇಳಿದೆ. ‘‘ತಪ್ಪು ಮಾಹಿತಿಯ ಕುರಿತು ಎಚ್ಚರಿಕೆ. ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ ಎಂಬ ಹೇಳಿಕೆ ಸುಳ್ಳು. ಇದು ಹಳೆಯ ವಿಡಿಯೊ: ಹಂಚಿಕೊಳ್ಳಲಾಗುತ್ತಿರುವ ದೃಶ್ಯಾವಳಿಗಳು ಹಿಂದಿನ ಕಾರ್ಯಕ್ರಮವೊಂದರ ಹಳೆಯ ವಿಡಿಯೊಗಳಾಗಿವೆ. ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ಹರಡುವ ಅಥವಾ ದಾರಿ ತಪ್ಪಿಸುವ ವಿಷಯವನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.’’ ಎಂದು ಬರೆಯಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ದೆಹಲಿಯ ಜಂತರ್‌ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆದಿರುವುದು ನಿಜ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ 2024ರ ಜನವರಿಯಲ್ಲಿ ನಡೆದ ಪ್ರತಿಭಟನೆಯದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Houthis attack Israeli oil pipeline? No, here are the facts

Fact Check: പ്രധാനമന്ത്രി നരേന്ദ്രമോദിയുടെ 76-ാം ജന്മദിനത്തില്‍ ബുര്‍ജ് ഖലീഫയില്‍ ആശംസ? വീഡിയോയുടെ സത്യമറിയാം

Fact Check: இரு கைகளும் இல்லாத பெண் ஜிம்னாஸ்டிக்ஸ் செய்யும் வைரல் காணொலி உண்மையா?

Fact Check: జముయి వేధింపుల కేసు నిందితులను ఎన్‌కౌంటర్‌లో అరెస్ట్ చేశారా? కాదు, వీడియో ముజఫర్‌నగర్‌కు చెందినది

Fact Check: മോട്ടോര്‍ വാഹന വകുപ്പിന്റ ഇ- ചെലാനുകളില്‍ നിന്ന് ഫോട്ടോ ഒഴിവാക്കുന്നു? പ്രചാരണം വ്യാജം