ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವೇಳೆ ಕೆಲ ಯುವತಿಯರು ನೃತ್ಯ ಮಾಡುತ್ತಿರುವ ವಿಡಿಯೊ ಎಂದು ಹೇಳಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗುತ್ತಿದೆ. 17 ಸೆಕೆಂಡ್‌ಗಳ ವಿಡಿಯೊದಲ್ಲಿ ಕೆಲವು ಯುವತಿಯರು ನೃತ್ಯ ಮಾಡುತ್ತಿರುವುದು ಹಾಗೂ ಅಲ್ಲಿದ್ದ ಜನರು ಅವರ ನೃತ್ಯವನ್ನು ವೀಕ್ಷಿಸುತ್ತಿರುವುದು ಕಂಡುಬರುತ್ತದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ಈಗ ಅವರು ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ವಿರೋಧಿಸುತ್ತಿಲ್ಲ, ಬದಲಿಗೆ ಅವರ ಗೌರವಾರ್ಥ 'ಮುಜ್ರಾ' ಮಾಡುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೊವನ್ನು ಮಾರ್ಚ್ 7ರಂದೇ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಪಂಜಾಬ್ ವಿಶ್ವವಿದ್ಯಾಲಯದ ಸನಾತನ ಧರ್ಮ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಈ ವಿಡಿಯೊ ಚಿತ್ರೀಕರಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ವೇಳೆ ‘ಎಸ್‌ಡಿ ಫ್ಲ್ಯಾಶ್ ಜೂಮ್’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾರ್ಚ್ 7ರಂದು ಅಪ್‌ಲೋಡ್ ಮಾಡಲಾಗಿದ್ದ ಇದೇ ವಿಡಿಯೊ ನಮಗೆ ದೊರೆಯಿತು.
ಈ ಇನ್‌ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಿದಾಗ, ಪಂಜಾಬ್ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಗೋಸ್ವಾಮಿ ಗಣೇಶ್ ದತ್ತ ಸನಾತನ ಧರ್ಮ ಕಾಲೇಜಿನಲ್ಲಿ ನಡೆಯುವ ನೃತ್ಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ಈ ಪುಟದಲ್ಲಿ ಹಂಚಿಕೊಳ್ಳಲಾಗುತ್ತದೆ ಎಂಬುದು ತಿಳಿದುಬಂದಿತು.
ಪರಿಶೀಲನೆಯ ವೇಳೆ ಇದೇ ಖಾತೆಯಲ್ಲಿ ಮಾರ್ಚ್ 9ರಂದು ಅಪ್‌ಲೋಡ್ ಮಾಡಲಾದ ಮತ್ತೊಂದು ವಿಡಿಯೊ ಕೂಡ ನಮಗೆ ದೊರೆಯಿತು. ಇದರಲ್ಲಿರುವ ದೃಶ್ಯಗಳು ವೈರಲ್ ವಿಡಿಯೊದಲ್ಲಿರುವ ದೃಶ್ಯಗಳಿಗೆ ಸಂಬಂಧಿಸಿದ್ದಾಗಿವೆ.
ಇದಲ್ಲದೆ, ವೈರಲ್ ವಿಡಿಯೊಗೆ ಸಂಬಂಧಿಸಿದ ದೃಶ್ಯಗಳು ಇತರ ಕೆಲವು ಇನ್‌ಸ್ಟಾಗ್ರಾಂ ಖಾತೆಗಳು ಮಾರ್ಚ್ 6ರಂದು ಮತ್ತು ಮಾರ್ಚ್ 9ರಂದು ಅಪ್‌ಲೋಡ್ ಮಾಡಿದ್ದ ವಿಡಿಯೊಗಳಲ್ಲೂ ಕಂಡುಬಂದವು. ಈ ವಿಡಿಯೊಗಳಲ್ಲಿ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಹಾಕಲಾಗಿದ್ದ ಪೋಸ್ಟರ್‌ನಲ್ಲಿ ‘ಸನಾತನ ಧರ್ಮ ಕಾಲೇಜಿನ ಎಸ್ಥೆಸಿಯಾ ಕ್ಲಬ್’ ಎಂದು ಸ್ಪಷ್ಟವಾಗಿ ಬರೆಯಲಾಗಿರುವುದು ಕಾಣಿಸಿತು.
ಹೀಗಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ಮುನ್ನವೇ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಇದೆ. ನಮ್ಮ ಪರಿಶೀಲನೆಯಲ್ಲಿ ದೊರೆತ ಸಾಕ್ಷ್ಯಗಳಿಂದ, ಈ ವೈರಲ್ ವಿಡಿಯೊ ವಾಸ್ತವವಾಗಿ ಪಂಜಾಬ್‌ನ ಎಸ್‌ಡಿ ಕಾಲೇಜಿನಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಕಾರ್ಯಕ್ರಮದ್ದಾಗಿದೆ.