ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರನ್ನು ಕ್ರೂರವಾಗಿ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬಾಂಗ್ಲಾದೇಶದಲ್ಲಿ ಇಬ್ಬರು ಮಹಿಳೆಯರು ಪಾಶ್ಚಿಮಾತ್ಯ ಉಡುಪು ಧರಿಸಿದ್ದಕ್ಕೆ ಮುಸ್ಲಿಮರು ಹಲ್ಲೆ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಪ್ರಸಾರವಾಗುತ್ತಿದೆ. ವೀಡಿಯೊದಲ್ಲಿ ಪುರುಷನೊಬ್ಬ ಮಹಿಳೆಯರನ್ನು ಕುರ್ಚಿಯಿಂದ ಹೊಡೆಯುತ್ತಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಐಸಿಸ್ ಆಳ್ವಿಕೆಯ ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಿದ ಇಬ್ಬರು ಮಹಿಳೆಯರ ಮೇಲೆ ದಾಳಿ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಬಾಂಗ್ಲಾದೇಶದಲ್ಲಿ ನಡೆದ ಜಾತ್ರೆಯಲ್ಲಿ ಆಹಾರ ವಿತರಣೆಯ ವಿವಾದದ ಸಂದರ್ಭದಲ್ಲಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಚಿತ್ರಿಸುತ್ತದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಡಿಸೆಂಬರ್ 19 ರಂದು ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ ದೇಶ್ ಟಿವಿ ನ್ಯೂಸ್‌ನ ಯೂಟ್ಯೂಬ್ ಪುಟದಲ್ಲಿ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿದೆ. 'ಚಿತ್ತಗಾಂಗ್‌ನಲ್ಲಿ ನಡೆದ ಜಾತ್ರೆಯಲ್ಲಿ ಯುವಕನೊಬ್ಬ ಇಬ್ಬರು ಮಹಿಳೆಯರನ್ನು ಕುರ್ಚಿಯಿಂದ ಹೊಡೆದಿದ್ದಾನೆ' ಎಂಬ ಬಾಂಗ್ಲಾ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ನಂತರ ಕೀವರ್ಡ್ ಹುಡುಕಾಟ ನಡೆಸಿದಾಗ ವೈರಲ್ ವೀಡಿಯೊಗೆ ಸಂಬಂಧಿಸಿದ ಬಾಂಗ್ಲಾದೇಶದ ಮಾಧ್ಯಮಗಳು ಪ್ರಕಟಿಸಿದ ವರದಿ ಸಿಕ್ಕಿತು. ಚಿತ್ತಗಾಂಗ್ ನಗರದ ಸಿಆರ್‌ಬಿ ಪ್ರದೇಶದಲ್ಲಿ ನಡೆದ ವಿಜಯ ಮೇಳದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪ್ರೊಜೊನ್ಮೊಕೋಥಾ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಈ ಘಟನೆ ಡಿಸೆಂಬರ್ 16 ರಂದು ನಡೆದಿದ್ದು, ಗುರುವಾರ ಮಧ್ಯಾಹ್ನ ಫೇಸ್‌ಬುಕ್‌ನಲ್ಲಿ ವೀಡಿಯೊ ವೈರಲ್ ಆಗಿದೆ ಎಂದು ವರದಿ ಹೇಳುತ್ತದೆ. ವಿಜಯ್ ದಿವಸ್ ಅನ್ನು ಗುರುತಿಸಲು ಚಿತ್ತಗಾಂಗ್ ಜಿಲ್ಲಾಡಳಿತವು ಭಾನುವಾರದಿಂದ ಮಂಗಳವಾರದವರೆಗೆ ಸಿಆರ್‌ಬಿ ಸಿರಿಶ್ತಾಲ ಪ್ರದೇಶದಲ್ಲಿ ಮೇಳವನ್ನು ಆಯೋಜಿಸಿತ್ತು. ಜಾತ್ರೆಯ ಸುತ್ತಲೂ ವಿವಿಧ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು ಮತ್ತು ಕೊನೆಯ ದಿನದಂದು ಸಾವಿರಾರು ಜನರು ಅಲ್ಲಿ ಜಮಾಯಿಸಿದರು. ಆಹಾರ ಸೇವೆಯ ಕುರಿತು ಹಲವಾರು ಅಂಗಡಿಗಳಲ್ಲಿ ನಡೆದ ವಾಗ್ವಾದದ ಸಂದರ್ಭದಲ್ಲಿ ಒಂದು ಹಂತದಲ್ಲಿ ಜಗಳ ಆರಂಭವಾಯಿತು ಎಂಬ ಮಾಹಿತಿ ಇದರಲ್ಲಿದೆ.
ವಿಜಯ ಮೇಳದಲ್ಲಿ ಭಾಗವಹಿಸಲು ಪಟೇಂಗಾ ಪ್ರದೇಶದಿಂದ ಬಂದಿದ್ದ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆದಿದೆ ಎಂದು ದೈನಿಕ್ ಆಜಾದಿ ವರದಿ ಮಾಡಿದೆ. ಆಹಾರ ಆರ್ಡರ್ ಸ್ವೀಕರಿಸುವಲ್ಲಿನ ವಿಳಂಬದ ಬಗ್ಗೆ ಮಹಿಳೆಯರು ವಾಗ್ವಾದ ನಡೆಸಿದರು, ಇದು ನಂತರ ವೈರಲ್ ವೀಡಿಯೊದಲ್ಲಿ ಕಂಡುಬರುವ ಜಗಳಕ್ಕೆ ಕಾರಣವಾಯಿತು ಎಂದು ವರದಿ ಹೇಳುತ್ತದೆ. ಘಟನೆಯ ನಂತರ, ಗಾಯಗೊಂಡ ಇಬ್ಬರು ಮಹಿಳೆಯರು ಹೊರಠಾಣೆ ತಲುಪಿ ದೂರು ದಾಖಲಿಸಿದ್ದಾರೆ ಮತ್ತು ವೀಡಿಯೊವನ್ನು ಪರಿಶೀಲಿಸುವ ಮೂಲಕ ಅಪರಾಧಿಗಳನ್ನು ಹುಡುಕಲು ಪ್ರಯತ್ನಿಸಲಾಗುತ್ತಿದೆ ಎಂದು ಸ್ಥಳದಲ್ಲಿ ಪೊಲೀಸ್ ಹೊರಠಾಣೆ ಉಸ್ತುವಾರಿ ವಹಿಸಿದ್ದ ಅಬು ಸಯೀದ್ ಹೇಳಿದ್ದಾರೆ ಎಂದು ವರದಿ ಹೇಳುತ್ತದೆ.
ಡಿಸೆಂಬರ್ 18 ರಂದು ಬಾಂಗ್ಲಾ ಮಾಧ್ಯಮ Prothomalo ಕೂಡ ಇದೇ ಮಾಹಿತಿಯೊಂದಿಗೆ ಸುದ್ದಿ ಪ್ರಕಟಿಸಿರುವುದನ್ನು ನೀವು ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬಾಂಗ್ಲಾದೇಶದಲ್ಲಿ ಪಾಶ್ಚಿಮಾತ್ಯ ಉಡುಪು ಧರಿಸಿದ ಇಬ್ಬರು ಮಹಿಳೆಯರ ಮೇಲೆ ಮುಸ್ಲಿಮರು ದಾಳಿ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.