Kannada

ವಿಜಯಪುರದ ಸೂಫಿ ಗುರು ತನ್ವೀರ್ ಪೀರಾ ಹಶ್ಮಿ ಅವರಿಗೆ ಐಎಸ್‌ಐಎಸ್‌ ಉಗ್ರರ ನಂಟಿರುವುದು ನಿಜವೆ?

Kumar Chitradurga

ವಾದ
ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ವೇದಿಕೆ ಹಂಚಿಕೊಂಡ ತನ್ವೀರ್‍‌ ಪೀರಾ ಹಶ್ಮಿಗೆ ಐಎಸ್‌ಐಎಸ್‌ ಉಗ್ರರ ನಂಟಿದೆ

ವಾಸ್ತವ
ತನ್ವೀರ್ ಪೀರಾ ಹಶ್ಮಿ ಅವರು ಇರಾಕ್‌ ಪ್ರವಾಸದಲ್ಲಿ ವಿವಿಧ ನಾಯಕರನ್ನು ಭೇಟಿಯಾದ ಫೋಟೋಗಳನ್ನು ಬಳಸಿ ಐಎಸ್‌ಐಎಸ್‌ ನಂಟು ಸೃಷ್ಟಿಸಲಾಗಿದೆ.

ಬುಧವಾರ ಬೆಳಗ್ಗೆ ವಿಜಯಪುರದ ಶಾಸಕ, ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ , “ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಐಸಿಸ್ ಭಯೋತ್ಪಾದಕರ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ” ಎಂದು ಕೆಲವು ಫೋಟೋಗಳನ್ನು ಟ್ವೀಟ್‌ ಮಾಡಿದ್ದರು.

“ತನ್ವಿರ್ ಪೀರಾ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗು ಮಧ್ಯ ಪ್ರಾಚ್ಯ ದೇಶಗಳ ಪ್ರವಾಸಗಳ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿರುವ ಚಿತ್ರಗಳು ಇಲ್ಲಿವೆ.” ಎಂದು ಆರೋಪಿಸಿದ್ದರು.

ತನ್ವೀರ್‍‌ ಅವರನ್ನು ಭಯೋತ್ಪಾದಕರ ಬೆಂಬಲಿಗ ಎಂದು ಹೇಳಿರುವ ಯತ್ನಾಳ್‌, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರನ್ನು ಭೇಟಿಯಾದ ಫೋಟೋಗಳನ್ನೂ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿಯ ರಾಜ್ಯ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದಲೂ ಈ ಕುರಿತು ಟ್ವೀಟ್‌ ಮಾಡಲಾಗಿದ್ದು, “ಇವತ್ತು ಐಸಿಸ್‌ ಜತೆ ಸಂಪರ್ಕ ಇರುವವರ ಜತೆ ವೇದಿಕೆ ಹಂಚಿಕೊಂಡಿರುವ ಮುಖ್ಯಮಂತ್ರಿಗಳು ನಾಳೆ ಇದೇ ಐಸಿಸ್‌ ಸಂಘಟನೆಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ..!

ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ ಅಶಾಂತಿಯನ್ನು ಸೃಷ್ಟಿಸಲು
@INCKarnataka ಸರ್ಕಾರ ಸಿದ್ಧತೆ ಮಾಡಿಕೊಂಡಿದೆ, ಕನ್ನಡಿಗರೇ ಎಚ್ಚರ..!” ಎನ್ನಲಾಗಿದೆ.

ಯತ್ನಾಳ್ ಅವರ ಟ್ವೀಟ್‌ ಆಧರಿಸಿ ಪೋಸ್ಟ್‌ ಕಾರ್ಡ್‌ ಕೂಡ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ, ” ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುತ್ತೇವೆ ಎಂದವರು ಈಗ ಉಗ್ರರ ಬೆಂಬಲಿಗರೊಡನೆ ಕೈ ಜೋಡಿಸುವ ಮೂಲಕ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ?” ಎಂದು ಪೋಸ್ಟ್‌ ಮಾಡಿದೆ.

ಫ್ಯಾಕ್ಟ್‌ಚೆಕ್‌

ವಿಜಯಪುರದ ಸೂಫಿ ಪರಂಪರೆಯ ಮುಖಂಡರಾದ ತನ್ವೀರ್ ಪೀರಾ ಹಶ್ಮಿಯವರಿಗೂ ಐಎಸ್‌ಐಎಸ್‌ ಉಗ್ರ ಸಂಘಟನೆಗೂ ಯಾವುದೇ ನಂಟಿಲ್ಲ.

ಬಸನಗೌಡ ಪಾಟೀಲ್‌ ಯತ್ನಾಳ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ( ಈ ಹಿಂದೆ ಟ್ವಿಟರ್) ಹಂಚಿಕೊಂಡ ಫೋಟೋಗಳನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು.

ಅಲ್‌ಹಶ್ಮಿಯೊರ್‍‌. ಆರ್ಗ್ ತಾಣದಲ್ಲಿ ಹಶ್ಮಿಯವರನ್ನು ಕುರಿತ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಗಣ್ಯರನ್ನು ಭೇಟಿಯಾದ ಫೋಟೋಗಳನ್ನೂ ಪ್ರಕಟಿಸಿದ್ದಾರೆ.

ಯತ್ನಾಳ್ ಅವರು ಹಂಚಿಕೊಂಡ ಫೋಟೋಗಳೂ ಈ ಫೋಟೋ ಗ್ಯಾಲರಿಯಲ್ಲಿವೆ.

ಈ ಚಿತ್ರಗಳು ಸಾರ್ವಜನಿಕವಾಗಿ ಕಳೆದ ಹತ್ತು ವರ್ಷಗಳಿಂದ ಲಭ್ಯವಿದ್ದು, ಯತ್ನಾಳ್‌ ಅವರು ಇವುಗಳನ್ನು ಪೂರ್ವಗ್ರಹದೊಂದಿಗೆ ಹಂಚಿಕೊಂಡಿದ್ದು ಅಲ್ಲದೆ, ತನಿಖೆಗೆ ಮಾಡುವಂತೆ ಕೇಂದ್ರ ಗೃಹ ಮಂತ್ರಿಗಳಿಗೆ ಪತ್ರಬರೆದಿದ್ದಾರೆ.

ಈ ಸಂಬಂಧ ಸ್ಥಳೀಯವಾಗಿ ಪೊಲೀಸ್‌ ದಾಖಲೆಗಳಲ್ಲಿ ಅಂತಹ ಯಾವುದಾದರೂ ಮಾಹಿತಿ ಇರುವ ಬಗ್ಗೆ ‘ಫ್ಯಾಕ್ಚುವಲಿ ರೈಟ್‌’ ತಿಳಿಯುವ ಪ್ರಯತ್ನ ಮಾಡಿತು. ಈ ಕುರಿತು ಅಧಿಕೃತ ಹೇಳಿಕೆ ಲಭ್ಯವಾಗದಿದ್ದರೂ, ತನ್ವೀರ್ ಹಶ್ಮಿಯವರಿಗೆ ಉಗ್ರ ನಂಟಿರುವ ಅಥವಾ ಸಮಾಜ ವಿರೋಧಿ ಚಟುವಟಿಕೆಯಂತಹ ಯಾವುದೇ ದಾಖಲೆಗಳು ಇಲ್ಲವೆಂದು ತಿಳಿದು ಬಂತು.

ತನ್ವೀರ್ ಕೇವಲ ಕಾಂಗ್ರೆಸ್‌ ನಾಯಕರಷ್ಟನ್ನೇ ಅಲ್ಲ, ಈ ಹಿಂದೆ ಬಿಜೆಪಿಯಲ್ಲಿದ್ದ ಮಾಜಿ ಸಚಿವರೂ ಆದ ಯಶವಂತ್ ಸಿನ್ಹಾರನ್ನು, ಹಾಲಿ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರನ್ನೂ ಭೇಟಿಯಾಗಿದ್ದಾರೆ.

ನಿತಿನ್‌ ಗಡ್ಕರಿಯವರೊಂದಿಗೆ ತನ್ವೀರ್ ಹಶ್ಮಿ
ಕೇಂದ್ರ ಮಾಜಿ ಸಚಿವ ಯಶವಂತ ಸಿನ್ಹಾ ಹಾಗೂ ಸಚಿವ ಹಾಗೂ ರಾಜ್ಯ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ರೊಂದಿಗೆ ತನ್ವೀರ್ ಹಶ್ಮಿ.

ತನ್ವೀರ್ ಅವರು ಸೂಫಿ ಪರಂಪರೆಯ ಹಾಗೂ ಸುನ್ನಿಸಮುದಾಯದ ಪ್ರಮುಖ ನಾಯಕರು, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಶಾಂತಿ-ಸಾಮರಸ್ಯದ ವಿಚಾರಗಳ ಮೂಲಕ ಗುರುತಿಸಿಕೊಂಡಿದ್ದಾರೆ.

ಮೂರು ದಶಕಗಳಿಗೂ ಹೆಚ್ಚುಕಾಲದಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿರುವ ಹಶ್ಮಿಯವರ ವಿರುದ್ಧ , ಸಾರ್ವಜನಿಕವಾಗಿ ಲಭ್ಯವಿರುವ ಫೋಟೋಗಳಿಗೆ ಉಗ್ರ ನಂಟನ್ನು ಆರೋಪಿಸಿ ಬಸನಗೌಡಪಾಟೀಲ್ ಯತ್ನಾಳ್‌ ಅವರು ಟ್ವೀಟ್‌ ಮಾಡಿದ್ದು, ಸುಳ್ಳು ಎಂದು ಸ್ಪಷ್ಟವಾಗಿ ತಿಳಿದು ಬಂದಿದೆ.

Fact Check: Old video of Sunita Williams giving tour of ISS resurfaces with false claims

Fact Check: Video of Nashik cop prohibiting bhajans near mosques during Azaan shared as recent

Fact Check: ഫ്രാന്‍സില്‍ കൊച്ചുകു‍ഞ്ഞിനെ ആക്രമിച്ച് മുസ്ലിം കുടിയേറ്റക്കാരന്‍? വീഡിയോയുടെ വാസ്തവം

Fact Check: சென்னை சாலைகள் வெள்ளநீரில் மூழ்கியதா? உண்மை என்ன?

ఫ్యాక్ట్ చెక్: హైదరాబాద్‌లోని దుర్గా విగ్రహం ధ్వంసమైన ఘటనను మతపరమైన కోణంతో ప్రచారం చేస్తున్నారు