Kannada

Fact Check: ಮಂಗಳೂರಿನ ಗುರುಪುರದಲ್ಲಿ ಭೂಕುಸಿತ ಎನ್ನಲಾಗುತ್ತಿರುವ ವೀಡಿಯೊ ಇಂಡೋನೇಷ್ಯಾದು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಪ್ರವಾಹದ ಸ್ಥಿತಿ ಉಂಟಾಗಿದೆ. ಇದರ ನಡುವೆ ಮಂಗಳೂರು ಬಳಿಯ ಗುರುಪುರದಲ್ಲಿ ಗುಡ್ಡ ಕುಸಿತದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Vinay Bhat

ಕರ್ನಾಟಕದಲ್ಲಿ ವರುಣನ ಆರ್ಭಟ ಜೋರಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಪ್ರವಾಹದ ಸ್ಥಿತಿ ಉಂಟಾಗಿದೆ. ಶಿರಾಡಿ-ಚಾರ್ಮಡಿ ಘಾಟಿಯಲ್ಲಿ ಪದೇ ಪದೇ ಭೂಕುಸಿತ ಉಂಟಾಗುತ್ತಿದೆ. ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು ಮುಂದಿನ ಕೆಲ ದಿನಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರ ನಡುವೆ ಮಂಗಳೂರು ಬಳಿಯ ಗುರುಪುರದಲ್ಲಿ ಗುಡ್ಡ ಕುಸಿತದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕುಂದಾಪುರ ಎಕ್ಸ್​ಪ್ರೆಸ್.ಕಾಮ್ ಎಂಬ ಫೇಸ್​ಬುಕ್ ಖಾತೆಯಲ್ಲಿ ಆಗಸ್ಟ್ 1, 2024 ರಂದು ವೀಡಿಯೊ ಹಂಚಿಕೊಳ್ಳಲಾಗಿದ್ದು 'ಮಂಗಳೂರು ಬಳಿಯ ಗುರುಪುದರಲ್ಲಿ ಗುಡ್ಡ ಕುಸಿತ' ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊದಲ್ಲಿ ರಸ್ತೆ ಪಕ್ಕದಲ್ಲಿರುವ ಗುಡ್ಡ ದಿಢೀರ್ ಕುಸಿದು ರಸ್ತೆಯು ಸಂಪೂರ್ಣ ಮಣ್ಣಿನಿಂದ ಮುಚ್ಚುತ್ತದೆ. ಇದರ ನಡುವೆ ಬೈಕ್ ಸವಾರರೊಬ್ಬರು ಅದೃಷ್ಟವಶಾತ್ ದೊಡ್ಡ ಅಪಾಯದಿಂದ ಪಾರಾಗುತ್ತಾರೆ.

ಇದೇ ವೀಡಿಯೊವನ್ನು ವಸಂತ್ ಹೆಗ್ಡೆ ಎಂಬವರು ಕೂಡ ಆಗಸ್ಟ್ 2, 2024 ರಂದು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದು 'ಗುರುಪುರ ಲೈವ್' ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ವಾಟ್ಸ್​ಆ್ಯಪ್​ನಲ್ಲಿ 'ಗುರುಪುರದಲ್ಲಿ ಇದೀಗ ನಡೆದ ಘಟನೆ.....' ಎಂಬ ಟೈಟಲ್​ನೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ.

ಗುರುಪುರದಲ್ಲಿ ಭೂಕುಸಿತ- ವಾಟ್ಸ್​ಆ್ಯಪ್ ಸ್ಕ್ರೀನ್ ಶಾಟ್.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಸದ್ಯ ಹರಿದಾಡುತ್ತಿರುವ ವೀಡಿಯೊ 2020 ರಲ್ಲಿ ಇಂಡೋನೇಷ್ಯಾದ ಭೂಕುಸಿತಕ್ಕೆ ಸಂಬಂಧಿಸಿದ್ದು ಎಂದು ನಾವು ಕಂಡುಕೊಂಡಿದ್ದೇವೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಜುಲೈ 21, 2020 ರಂದು ಎನ್​ಡಿಟಿವಿ.ಕಾಮ್ ಪ್ರಟಿಸಿರುವ ಸುದ್ದಿ ಸಿಕ್ಕಿತು. 'ಕ್ಯಾಮೆರಾದಲ್ಲಿ ಸೆರೆ: ಭೂಕುಸಿತದ ಸಂದರ್ಭ ಸ್ವಲ್ಪದರಲ್ಲೇ ಬಚಾವ್ ಆದ ಬೈಕ್ ಸವಾರ' ಎಂಬ ಹೆಡ್​ಲೈನ್​ನೊಂದಿಗೆ ಈ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿರುವ ಎನ್​ಡಿಟಿವಿ, 'ಸ್ಕೂಟರ್ ಚಾಲಕನು ಭಾರಿ ಭೂಕುಸಿತದ ಅಡಿಗೆ ಸಿಲುಕಿಕೊಳ್ಳುವುದರಿಂದ ಸ್ವಲ್ಪದರಲ್ಲೇ ಪಾರಾದರು. ಈ ವರ್ಷದ (2020) ಏಪ್ರಿಲ್‌ನಲ್ಲಿ ಇಂಡೋನೇಷ್ಯಾದಲ್ಲಿ ಭೂಕುಸಿತ ಸಂಭವಿಸಿದೆ. ಆದರೆ, ಈ ವೀಡಿಯೊ ವೈರಲ್ ಆಗುತ್ತಿದೆ' ಎಂದು ಬರೆಯಲಾಗಿದೆ.

ಹಾಗೆಯೆ ಏಪ್ರಿಲ್ 10, 2020 ರಂದು ಮೆಟ್ರೊ ಟಿವಿ ಎಂಬ ಯೂಟ್ಯೂಬ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, 'ಪಶ್ಚಿಮ ಜಾವಾದ ಸಿಯಾಂಜೂರ್‌ನಲ್ಲಿ ಗುರುವಾರ (09/04/2020) 100 ಮೀಟರ್ ಎತ್ತರದಿಂದ ಬಂಡೆಯೊಂದು ಜರಿದು ಭೂಕುಸಿತ ಉಂಟಾಗಿ ಇಡೀ ರಸ್ತೆಗೆ ಮಣ್ಣು ಬಿದ್ದಿದೆ. ಇದರ ಪರಿಣಾಮ, ದಕ್ಷಿಣ ಸಿಯಾಂಜೂರ್‌ನ ಉಪ-ಜಿಲ್ಲೆಗಳಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು' ಎಂದು ಬರೆಯಲಾಗಿದೆ.

ಇಂಡೋನೇಷ್ಯಾದ ಸ್ಥಳೀಯ ಮಾಧ್ಯಮ ಮಲಂಗ್ ಟೈಮ್ಸ್​ನಲ್ಲಿ ಕೂಡ ನಾವು ಇದೇ ವೀಡಿಯೊವನ್ನು ಕಂಡಿದ್ದೇವೆ. 10 ಏಪ್ರಿಲ್, 2020 ರಂದು ಈ ಸುದ್ದಿ ಪ್ರಕಟವಾಗಿದ್ದು, 'ಸಿಯಾಂಜೂರ್ ರೀಜೆನ್ಸಿಯ ಸುಕನಗರ ಗ್ರಾಮದಲ್ಲಿ ಭೂಕುಸಿತದಿಂದ ಮೋಟಾರ್‌ಬೈಕ್ ಸವಾರರೊಬ್ಬರು ಸಾವಿನಂಚಿನಿಂದ ಪಾರಾಗಿದ್ದಾರೆ. ಭೂಕುಸಿತದಿಂದಾಗಿ ಕಾರುಗಳು ಮತ್ತು ಮೋಟಾರ್‌ಬೈಕ್‌ಗಳು ಸಾಲುಗಟ್ಟಿನಿಂತಿದ್ದವು. ಈ ಘಟನೆಯಿಂದ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ' ಎಂಬ ಮಾಹಿತಿ ನೀಡಲಾಗಿದೆ.

ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನ ಗುರುಪುರದಲ್ಲಿ ಭೂಕುಸಿತ ಎನ್ನಲಾಗುತ್ತಿರುವ ವೈರಲ್ ವೀಡಿಯೊ ಸುಳ್ಳಾಗಿದೆ. ಮತ್ತು ಇದು ಇಂಡೋನೇಷ್ಯಾದ ಸಿಯಾಂಜೂರ್‌ನಲ್ಲಿ ನಡೆದ ಘಟನೆ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: யோகி ஆதித்யநாத்தை ஆதரித்து தீப்பந்தத்துடன் பேரணி நடத்தினரா பொதுமக்கள்? உண்மை என்ன

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್