ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 26ನೇ ವಯಸ್ಸಿನಲ್ಲಿ ಕೇದರನಾಥ ದೇವಸ್ಥಾನಕ್ಕೆ ತಮ್ಮ ಕೈಗಳ ಮೇಲೆ ನಡೆದು ಪ್ರದಕ್ಷಿಣೆ ಹಾಕಿದರು ಎಂದು ಪ್ರತಿಪಾದಿಸುವ ವಿಡಿಯೋ ತುಣುಕು ವೈರಲ್ ಆಗಿದೆ.
ಒಂದು ನಿಮಿಷ ಇಪ್ಪತ್ತಾರು ಸೆಕೆಂಡ್‌ಗಳ ಈ ವಿಡಿಯೋವನ್ನು ಬಿಜೆಪಿ ನಾಯಕ, ಮಾಜಿ ಸಚಿವ ಬಿ ಸಿ ಪಾಟೀಲ್ ಸೇರಿದಂತೆ ಹಲವರು ತಮ್ಮ ಎಕ್ಸ್ ಖಾತೆಯಲ್ಲಿ, ಹಂಚಿಕೊಂಡಿದ್ದರು. ಬಿ ಸಿ ಪಾಟೀಲ್ ಟ್ವೀಟ್ ಡಿಲೀಟ್ ಮಾಡಿದ್ದಾರೆ.
ವಿಡಿಯೋದೊಂದಿಗೆ, "ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಅವರು 26 ವರ್ಷ ವಯಸ್ಸಿನವರಾಗಿದ್ದಾಗ, ಅವರು ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದರು, ನೀವೆಲ್ಲರೂ ಒಮ್ಮೆ ನೋಡಿ." ಟಿಪ್ಪಣಿ ಬರೆದಿದ್ದಾರೆ.
ವೈರಲ್ ಆಗಿರುವ ವಿಡಿಯೋದಿಂದ ಆಯ್ದ ಸ್ಕ್ರೀನ್ ಶಾಟ್ ಬಳಸಿ, ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ 2021ರಲ್ಲಿ ವಿಶ್ವ ಯೋಗದಿನದಂದು ಕೇದರನಾಥದ ದೇಗುಲದ ಎದುರು ಯೋಗ ಪ್ರದರ್ಶಿಸಿದ ವಿಡಿಯೋ ತುಣುಕು ಲಭ್ಯವಾಯಿತು.
ಕೇದರನಾಥ ದೇಗುಲದ ಅರ್ಚಕರಾದ ಸಂತೋಷ್ ತ್ರಿವೇದಿ ತಮ್ಮ ವಿಶಿಷ್ಟ ಯೋಗ ಕೌಶಲ್ಯವನ್ನು ಪ್ರದರ್ಶಿಸಿ, ಕೈಗಳ ಮೇಲೆ ಪ್ರದಕ್ಷಿಣೆ ಹಾಕಿದ ಈ ವಿಡಿಯೋ ವಿವಿಧ ಮಾಧ್ಯಮಗಳಲ್ಲಿ ಭಿತ್ತರವಾಯಿತು.
ಇಂಡಿಯಾ ಟಿವಿಯಲ್ಲಿ ಬಿತ್ತರವಾದ ಈ ವರದಿಯನ್ನು ಗಮನಿಸಿ.
ಈಟಿವಿ ಭಾರತ್ ವೆಬ್ ತಾಣದಲ್ಲಿ ಪ್ರಕಟವಾದ ಸುದ್ದಿಯಲ್ಲಿ ವಿಡಿಯೋ ತುಣುಕೂ ಇದೆ.
ಈ ಹಿನ್ನೆಲೆಯಲ್ಲಿ ಇದು ನರೇಂದ್ರ ಮೋದಿಯವರು ತಮ್ಮ 26ನೇ ವಯಸ್ಸಿನಲ್ಲಿ ಯೋಗ ಮಾಡಿದ ವಿಡಿಯೋ ಅಲ್ಲ ಎಂಬುದು ದೃಢಪಡುತ್ತದೆ.