ಜುಲೈ 30, 2025 ರಂದು ರಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿತು, ಇದು ರಿಕ್ಟರ್ ಮಾಪಕದಲ್ಲಿ 8.8 ರಷ್ಟು ದಾಖಲಾಗಿತ್ತು. ಅದರ ನಂತರ ಸುನಾಮಿ ಅಪ್ಪಳಿಸಿತು. ಈ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಸುನಾಮಿ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವೀಡಿಯೊ ವೈರಲ್ ಆಗುತ್ತಿದೆ. ಇದೀಗ ಅಲೆಯೊಂದು ಬ್ರಿಡ್ಜ್ ದಾಟಿ ರಸ್ತೆಯಲ್ಲಿರುವ ಕಾರಿಗೆ ಅಪ್ಪಳಿಸುತ್ತಿರುವ ವೀಡಿಯೊವನ್ನು ಅನೇಕರು ಹಂಚಿಕೊಳ್ಳುತ್ತಿದ್ದು, ಇದು ರಷ್ಯಾದ್ದು ಎಂದು ಹೇಳುತ್ತಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಹಳೆಯದ್ದಾಗಿದ್ದು, ರಷ್ಯಾದಲ್ಲಿ ಸಂಭವಿಸಿದ ಭೂಕಂಪದ ನಂತರ ಉಂಟಾದ ಸುನಾಮಿಯದ್ದಲ್ಲ.
ಸತ್ಯ ಪರಿಶೀಲನೆಯ ಭಾಗವಾಗಿ ಪ್ರಸಾರವಾಗುತ್ತಿರುವ ವೀಡಿಯೊದ ಕೆಲವು ಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಕೆಲ ಮಾಧ್ಯಮ ವರದಿಗಳು ಕಂಡುಬಂದಿದೆ. ನವೆಂಬರ್ 27, 2023 ರಂದು ಹುರಿಯತ್ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ವರದಿಯಲ್ಲಿ ಈ ವೀಡಿಯೊದಲ್ಲಿ ಕೆಲ ಭಾಗವನ್ನು ನೋಡಬಹುದು.
ಪೂರ್ವ ಕಪ್ಪು ಸಮುದ್ರ ಪ್ರದೇಶದಲ್ಲಿ ಮಳೆಗೆ ಸಂಬಂಧಿಸಿದ ವಿಪತ್ತುಗಳ ಕುರಿತಾದ ವರದಿ ಇದರಲ್ಲಿದೆ. ಬಿರುಗಾಳಿಗಳಿಂದಾಗಿ ಕಪ್ಪು ಸಮುದ್ರದ ಕರಾವಳಿಯ ವಿವಿಧ ನಗರಗಳಲ್ಲಿ ಸಮುದ್ರದ ಉಬ್ಬರಗಳು ಸಂಭವಿಸಿವೆ ಮತ್ತು ಗಿರೆಸುನ್ ಟೈರ್ಬೋಲು ಕರಾವಳಿಯಲ್ಲಿ ಅಲೆಗಳು ರಸ್ತೆಗೆ ಅಪ್ಪಳಿಸಿವೆ ಎಂದು ವರದಿ ಹೇಳುತ್ತದೆ.
ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ಹುಡುಕಿದಾಗ ಅದೇ ವೀಡಿಯೊ ಕಂಡುಬಂದಿದೆ. YouTube ಚಾನಲ್‌ನಲ್ಲಿಯೂ ಸಹ ನವೆಂಬರ್ 27, 2023 ರಂದು ಹಂಚಿಕೊಳ್ಳಲಾಗಿದೆ.
ಬಿರುಗಾಳಿಗಳು ಮತ್ತು ದೊಡ್ಡ ಅಲೆಗಳಿಂದಾಗಿ ಗಿರೆಸುನ್‌ನ ಟೈರ್‌ಬೋಲುವಿನಲ್ಲಿ ಹಾನಿ ಸಂಭವಿಸಿದೆ ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗುತ್ತಿರುವ ದೃಶ್ಯಾವಳಿಗಳು ಜುಲೈ 30, 2025 ರಂದು ರಷ್ಯಾದಲ್ಲಿ ಸಂಭವಿಸಿದ ಭೂಕಂಪದ ನಂತರ ಸಂಭವಿಸಿದ ಸುನಾಮಿಗೆ ಸಂಬಂಧವನ್ನು ಹೊಂದಿಲ್ಲ ಮತ್ತು ಈ ವೀಡಿಯೊ 2023 ರಲ್ಲಿ ಟರ್ಕಿಯಲ್ಲಿ ಸಂಭವಿಸಿದ ಸುನಾಮಿಯದ್ದಾಗಿದೆ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.