Top Stories

Fact Check: ಮುಸ್ಲಿಂ ಮಹಿಳೆ ಸರ್ಕಾರಿ ಪರೀಕ್ಷೆಯಲ್ಲಿ ವಂಚನೆ ಮಾಡಿ ಸಿಕ್ಕಿಬಿದ್ದಿದ್ದಾಳೆಯೇ? ಇಲ್ಲ, ಇಲ್ಲಿದೆ ಸತ್ಯ

ಈ ವೀಡಿಯೊದಲ್ಲಿ ಹಿಜಾಬ್ ಧರಿಸಿದ ಹುಡುಗಿಯೊಬ್ಬಳನ್ನು ಆಟೋದಲ್ಲಿ ವ್ಯಕ್ತಿಯೊಬ್ಬ ಪ್ರಶ್ನಿಸುತ್ತಿರುವುದನ್ನು ತೋರಿಸಲಾಗಿದೆ. ಹುಡುಗಿಯ ಬಳಿ ವಾಕಿ-ಟಾಕಿ, ಟ್ಯಾಬ್ ಮತ್ತು ಮೊಬೈಲ್ ಫೋನ್ ಸಹ ಕಾಣಬಹುದು. ಬುರ್ಖಾ ಧರಿಸಿದ್ದ ಮುಸ್ಲಿಂ ಹುಡುಗಿ ಈ ಅಪರಾಧ ಎಸಗಿದ್ದಾಳೆ ಎಂದು ಹೇಳುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

Vinay Bhat

ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಸರ್ಕಾರಿ ಉದ್ಯೋಗ ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಯೊಬ್ಬರು ನಕಲು ಮಾಡಲು ಸಹಾಯ ಮಾಡಲು ಮಹಿಳೆಯೊಬ್ಬರು ಹೈಟೆಕ್ ಉಪಕರಣಗಳನ್ನು ಬಳಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಹಿಜಾಬ್ ಧರಿಸಿದ ಹುಡುಗಿಯೊಬ್ಬಳನ್ನು ಆಟೋದಲ್ಲಿ ವ್ಯಕ್ತಿಯೊಬ್ಬ ಪ್ರಶ್ನಿಸುತ್ತಿರುವುದನ್ನು ತೋರಿಸಲಾಗಿದೆ. ಹುಡುಗಿಯ ಬಳಿ ವಾಕಿ-ಟಾಕಿ, ಟ್ಯಾಬ್ ಮತ್ತು ಮೊಬೈಲ್ ಫೋನ್ ಸಹ ಕಾಣಬಹುದು. ಬುರ್ಖಾ ಧರಿಸಿದ್ದ ಮುಸ್ಲಿಂ ಹುಡುಗಿ ಈ ಅಪರಾಧ ಎಸಗಿದ್ದಾಳೆ ಎಂದು ಹೇಳುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬುರ್ಖಾ ಧರಿಸಿ ಪರೀಕ್ಷೆ ಬರೆಯುವುದರಿಂದಾಗುವ ಅನುಕೂಲಗಳು... ಬಿಲಾಸ್ಪುರ ಜಿಲ್ಲೆಯ ರಾಮ್ ದುಲಾರೆ ಶಾಲೆಯಲ್ಲಿ ಪಿಡಬ್ಲ್ಯೂಡಿ ಸಿವಿಲ್ ಎಂಜಿನಿಯರ್ ಪರೀಕ್ಷೆ ಬರೆಯುತ್ತಿದ್ದ ಮುನ್ನಾ ಭಾಭಿ ಅವರ ಕಾಲರ್‌ನಲ್ಲಿ ಮೈಕ್ರೋ ಕ್ಯಾಮೆರಾ ಮತ್ತು ವಾಕಿ-ಟಾಕಿ ಇತ್ತು. ಎರಡನೇ ಅತ್ತಿಗೆ ಆಟೋದಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳು... ಸರಕಾರಿ ಕೆಲಸ ಎಲ್ಲಿಂದ ಸಿಗುತ್ತೆ ನಿಯತ್ತಾಗಿ ಪರೀಕ್ಷೆ ಬರೆದವರಿಗೆ ಹೇಳಿ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೀಡಿಯೊದಲ್ಲಿರುವುದು ಮುಸ್ಲಿಂ ಹುಡುಗಿ ಅಲ್ಲ, ಆಕೆಯ ಹೆಸರು ಅನುಸೂರ್ಯ. ಇನ್ನೋರ್ವಳ ಹೆಸರು ಆಕೆಯ ಸಹೋದರಿ ಅನುರಾಧಾ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಜುಲೈ 14 ರಂದು ETV ಭಾರತ್‌ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಬಿಲಾಸ್ಪುರದ ಸರ್ಕಂಡದಲ್ಲಿ ನಡೆದ ಸಬ್ ಎಂಜಿನಿಯರ್ ನೇಮಕಾತಿ ಪರೀಕ್ಷೆಯ ಸಮಯದಲ್ಲಿ ಇಬ್ಬರು ಸಹೋದರಿಯರು ವಂಚನೆ ಮಾಡುತ್ತಿರುವುದು ಕಂಡುಬಂದಿದೆ ಎಂದು ಇದರಲ್ಲಿ ಹೇಳಲಾಗಿದೆ. ಅವರಲ್ಲಿ ಒಬ್ಬರು ಪರೀಕ್ಷೆ ಬರೆಯುತ್ತಿದ್ದರೆ, ಕೇಂದ್ರದ ಹೊರಗೆ ಆಟೋದಲ್ಲಿ ಕುಳಿತಿದ್ದ ಇನ್ನೊಬ್ಬರು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಂಡು ಅವರನ್ನು ಸಂಪರ್ಕಿಸುತ್ತಿದ್ದರು ಎಂದು ವರದಿ ತಿಳಿಸಿದೆ.

ಹಾಗೆಯೆ ಜುಲೈ 14 ರಂದು ಇಂಡಿಯನ್ ಎಕ್ಸ್​ಪ್ರೆಸ್ ಈ ಘಟನೆಯ ಕುರಿತು ಸಂಕ್ಷಿಪ್ತ ವರದಿ ಮಾಡಿರುವುದು ನಾವು ಕಂಡುಕೊಂಡಿದ್ದೇವೆ. ‘‘ಛತ್ತೀಸ್‌ಗಢ ವೃತ್ತಿಪರ ಪರೀಕ್ಷಾ ಮಂಡಳಿಯು ಜುಲೈ 13, 2025 ರಂದು ಬಿಲಾಸ್ಪುರದಲ್ಲಿ ಸಾರ್ವಜನಿಕ ಕಾರ್ಯ ಇಲಾಖೆಯಲ್ಲಿ 113 ಉಪ ಎಂಜಿನಿಯರ್ (ಸಿವಿಲ್ ಮತ್ತು ಎಲೆಕ್ಟ್ರಿಕಲ್/ಮೆಕ್ಯಾನಿಕಲ್) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ನಡೆಸಿತು. ಸರ್ಕಂಡದ ಸರ್ಕಾರಿ ರಾಮ್ದುಲಾರೆ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರೀಕ್ಷೆಯ ಸಮಯದಲ್ಲಿ, ಹೈಟೆಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿತು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅನುಸೂರ್ಯ ಮತ್ತು ಅನುರಾಧ ಎಂಬ ಇಬ್ಬರು ಸಹೋದರಿಯರನ್ನು ಬಂಧಿಸಿದರು. ಅಧಿಕಾರಿಗಳ ಪ್ರಕಾರ, ಪರೀಕ್ಷಾ ಹಾಲ್‌ನೊಳಗಿನ ಅಭ್ಯರ್ಥಿಯು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿದ್ದ ಗುಪ್ತ ಕ್ಯಾಮೆರಾವನ್ನು ಬಳಸಿಕೊಂಡು ಪ್ರಶ್ನೆ ಪತ್ರಿಕೆಯ ಚಿತ್ರಗಳನ್ನು ಹೊರಗಿನ ತನ್ನ ಸಹೋದರಿಗೆ ರವಾನಿಸಿದಳು, ಈಕೆಯ ಕಿವಿಯಲ್ಲಿ ಈಯರ್ ಫೋನ್ ಕೂಡ ಇತ್ತು. ನಂತರ ಅವರು ವಾಕಿ-ಟಾಕಿ ಮೂಲಕ ಉತ್ತರಗಳನ್ನು ಪ್ರಸಾರ ಮಾಡಿದರು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಪಿ. ಮಂಡಲ್ ನೀಡಿದ ದೂರಿನ ಆಧಾರದ ಮೇಲೆ, ಬಿಲಾಸ್ಪುರದ ಸರ್ಕಂಡ ಪೊಲೀಸರಲ್ಲಿ ಬಿಎನ್‌ಎಸ್, ಐಟಿ ಕಾಯ್ದೆ ಮತ್ತು ಛತ್ತೀಸ್‌ಗಢ ಪರೀಕ್ಷಾ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಔಪಚಾರಿಕ ಪ್ರಕರಣ ದಾಖಲಿಸಲಾಗಿದೆ’’ ಎಂಬ ಮಾಹಿತಿ ಇದರಲ್ಲಿದೆ.

‘‘ಅನುಸೂರ್ಯ ತನ್ನ ಬಟ್ಟೆಯೊಳಗೆ ಕ್ಯಾಮೆರಾವನ್ನು ಬಚ್ಚಿಟ್ಟು, ಅದರ ಮೂಲಕ ಪ್ರಶ್ನೆ ಪತ್ರಿಕೆಯ ಚಿತ್ರಗಳನ್ನು ತನ್ನ ಸಹೋದರಿ ಅನುರಾಧಾ ಅವರಿಗೆ ಕಳುಹಿಸಿದಳು. ನಂತರ ಅವಳು ಆನ್‌ಲೈನ್‌ನಲ್ಲಿ ಉತ್ತರಗಳನ್ನು ಹುಡುಕಿ, ತಾನು ಧರಿಸಿದ್ದ ಮೈಕ್ರೋ-ಇಯರ್‌ಪೀಸ್‌ಗೆ ಸಂಪರ್ಕಗೊಂಡಿರುವ ವಾಕಿ-ಟಾಕಿ ಮೂಲಕ ಹಂಚಿಕೊಳ್ಳುತ್ತಿದ್ದಳು. ರಹಸ್ಯ ಕ್ಯಾಮೆರಾ, ಮೈಕ್ರೊಫೋನ್, ಬ್ಲೂಟೂತ್ ಸಾಧನ, ವಾಕಿ-ಟಾಕಿಗಳು, ಟ್ಯಾಬ್ಲೆಟ್ ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ಏಳು ಎಲೆಕ್ಟ್ರಾನಿಕ್ ಸಾಧನಗಳನ್ನು ಇಬ್ಬರು ಸಹೋದರಿಯರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ’’ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.

ಬಂಧಿತ ಅನುರಾಧ ಮತ್ತು ಅನುಸೂರ್ಯ ಅವರ ವಿವರಗಳನ್ನು ಒಳಗೊಂಡಂತೆ ಬಿಲಾಸ್ಪುರ ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ವಿವರಣೆಯನ್ನು ನೀಡಿದ್ದಾರೆ. ಅನುರಾಧ ಮತ್ತು ಅನುಸೂರ್ಯ ಛತ್ತೀಸ್‌ಗಢದ ಜಶ್ಪುರ ಜಿಲ್ಲೆಯ ಕುಪರ್ಕಪ ಗ್ರಾಮದ ನಿವಾಸಿ ಕಾಲೇಶ್ವರ ರಾಮ್ ಅವರ ಮಕ್ಕಳು ಎಂಬ ಮಾಹಿತಿ ಇದರಲ್ಲಿದೆ. ಜುಲೈ 15, 2025 ರಂದು ಬಿಲಾಸ್ಪುರ ಪೊಲೀಸರು ಹಂಚಿಕೊಂಡ ಪೋಸ್ಟ್ ಅನ್ನು ಕೆಳಗೆ ನೋಡಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಿಲಾಸ್ಪುರದಲ್ಲಿ ಸರ್ಕಾರಿ ಪರೀಕ್ಷೆಯ ಸಮಯದಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ನಕಲು ಮಾಡುತ್ತಾ ಸಿಕ್ಕಿಬಿದ್ದಿದ್ದಾಳೆ ಎಂದು ಆರೋಪಿಸುತ್ತಿರುವ ವೈರಲ್ ಪೋಸ್ಟ್‌ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Hindus vandalise Mother Mary statue during Christmas? No, here are the facts

Fact Check: തിരുവനന്തപുരത്ത് 50 കോടിയുടെ ഫയല്‍ ഒപ്പുവെച്ച് വി.വി. രാജേഷ്? പ്രചാരണത്തിന്റെ സത്യമറിയാം

Fact Check: இந்திய அரசு 'பட்டர் சிக்கன்' சுவை கொண்ட ஆணுறைகளை அறிமுகப்படுத்தியதா? உண்மை அறிக

Fact Check: ಅನೇಕ ಸಾಧುಗಳು ಎದೆಯ ಆಳದವರೆಗೆ ಹಿಮದಲ್ಲಿ ನಿಂತು ಓಂ ನಮಃ ಶಿವಾಯ ಮಂತ್ರ ಜಪಿಸುತ್ತಿರುವುದು ನಿಜವೇ?

Fact Check: మంచులో ధ్యానం చేస్తున్న నాగ సాధువులు? లేదు, నిజం ఇక్కడ తెలుసుకోండి...