Top Stories

Fact Check: ಪಶ್ಚಿಮ ಬಂಗಾಳದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಮುಸ್ಲಿಮರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡುತ್ತಿದ್ದಾರೆಯೇ?

ಮುಸ್ಲಿಂ ಗುಂಪೊಂದು ಮಿಲಿಟರಿ ಅಧಿಕಾರಿಗಳ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Vinay Bhat

ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಏತನ್ಮಧ್ಯೆ, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾನೂನು ತಿದ್ದುಪಡಿಯನ್ನು ಸಾರ್ವಜನಿಕವಾಗಿ ವಿರೋಧಿಸಿದ ನಂತರ ಪಶ್ಚಿಮ ಬಂಗಾಳದಲ್ಲಿ ಅನೇಕ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಮಾರ್ಪಟ್ಟವು. ಮುರ್ಷಿದಾಬಾದ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಗುಂಪೊಂದು ಮಿಲಿಟರಿ ಅಧಿಕಾರಿಗಳ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ, ಭದ್ರತಾ ಸಿಬ್ಬಂದಿಗೆ ಸ್ವತಃ ರಕ್ಷಣೆಯ ಅಗತ್ಯವಿತ್ತು. ಇದು ಪಶ್ಚಿಮ ಬಂಗಾಳ ಭಾರತದ್ದೇ ಅಥವಾ ಬಾಂಗ್ಲಾದೇಶದ್ದೇ???. ಈ ವಿಡಿಯೋ ನೋಡಿದ ನಂತರ ಮೋದಿ ಮತ್ತು ಶಾ ಅವರಿಗೆ ನಾಚಿಕೆಯಾಗುತ್ತದೆಯೋ ಇಲ್ಲವೋ?’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ತನಿಖೆಯಲ್ಲಿ ಈ ಹೇಳಿಕೆ ಸುಳ್ಳು ಮತ್ತು ವೀಡಿಯೋ ಐದು ವರ್ಷ ಹಳೆಯದು ಎಂದು ಸೌತ್ ಚೆಕ್ ಕಂಡುಹಿಡಿದಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿನ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಪರಿಶೀಲನೆಯನ್ನು ನಡೆಸಿದ ನಂತರ ಈ ವೀಡಿಯೊವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಕೊಂಡಿದ್ದೇವೆ. ಏಪ್ರಿಲ್ 29, 2020 ರಂದು ಹಂಚಿಕೊಳ್ಳಲಾದ ಈ ವೀಡಿಯೊ, ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಪೊಲೀಸರ ಮೇಲೆ ನಡೆದ ಗುಂಪು ದಾಳಿಯ ವಿವರಣೆಯೊಂದಿಗೆ ಇದೆ.

ಈ ಸುಳಿವನ್ನು ಪಡೆದುಕೊಂಡು ಹುಡುಕಿದಾಗ, ಹಿಂದೂಸ್ತಾನ್ ಟೈಮ್ಸ್ ಸೇರಿದಂತೆ ವಿವಿಧ ರಾಷ್ಟ್ರೀಯ ಮಾಧ್ಯಮಗಳು ಏಪ್ರಿಲ್ 29, 2020 ರಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ದೃಶ್ಯಗಳನ್ನು ಹಂಚಿಕೊಂಡಿರುವುದು ಸಿಕ್ಕಿತು.

ಹಾಗೆಯೆ ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಘಟನೆಗೆ ಸಂಬಂಧಿಸಿದ ವಿವರವಾದ ವರದಿಗಳು ಸಿಕ್ಕಿವೆ. ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿ ಮಾರುಕಟ್ಟೆಯಲ್ಲಿ ಜಮಾಯಿಸಿದ್ದ ಜನರ ಗುಂಪನ್ನು ಚದುರಿಸಲು ಪ್ರಯತ್ನಿಸುತ್ತಿದ್ದ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲೆ ಜನರು ಹಲ್ಲೆ ನಡೆಸಿದ ಘಟನೆ ಇದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಏಪ್ರಿಲ್ 29, 2020 ರಂದು ವರದಿ ಮಾಡಿದೆ. ಈ ಘಟನೆ ಮಂಗಳವಾರ ನಡೆದಿದೆ.

ಇದರಿಂದ ಈ ದೃಶ್ಯಾವಳಿ ಐದು ವರ್ಷ ಹಳೆಯದು ಮತ್ತು ಆ ವೀಡಿಯೊಗೂ ಪ್ರಸ್ತುತ ವಕ್ಫ್ ಪ್ರತಿಭಟನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಹೀಗಾಗಿ ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ಶುಕ್ರವಾರದ ಪ್ರಾರ್ಥನೆಯ ನಂತರ ಮುಸ್ಲಿಂ ಗುಂಪೊಂದು ಮಿಲಿಟರಿ ಸಿಬ್ಬಂದಿಯ ಮೇಲೆ ದಾಳಿ ಮಾಡುತ್ತಿರುವ ವಿವರಣೆಯೊಂದಿಗೆ ಪ್ರಸಾರವಾಗುತ್ತಿರುವ ವೀಡಿಯೊ ದಾರಿತಪ್ಪಿಸುವಂತಿದೆ. ಏಪ್ರಿಲ್ 2020 ರಲ್ಲಿ ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸುತ್ತಿದ್ದ ಗುಂಪನ್ನು ಚದುರಿಸಲು ಪ್ರಯತ್ನಿಸಿದ ಪೊಲೀಸರು ಮತ್ತು ಮಿಲಿಟರಿ ಅಧಿಕಾರಿಗಳ ಮೇಲೆ ಜನಸಮೂಹ ದಾಳಿ ಮಾಡಲು ಪ್ರಯತ್ನಿಸುತ್ತಿರುವ ದೃಶ್ಯಗಳು ಇದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Elephant hurls guard who obstructed ritual in Tamil Nadu? No, here’s what happened

Fact Check: ശബരിമല മകരവിളക്ക് തെളിയിക്കുന്ന പഴയകാല ചിത്രമോ ഇത്? സത്യമറിയാം

Fact Check: இந்துக் கடவுளுக்கு தீபாராதனை காட்டினாரா அசாதுதீன் ஓவைசி? உண்மை அறிக

Fact Check: ಮೋದಿ ಸೋಲಿಗೆ ಅಸ್ಸಾಂನಲ್ಲಿ ಮುಸ್ಲಿಮರು ಪ್ರಾರ್ಥಿಸುತ್ತಿದ್ದಾರೆ ಎಂದು ಬಾಂಗ್ಲಾದೇಶದ ವೀಡಿಯೊ ವೈರಲ್

Fact Check: శ్రీలంక వరదల్లో ఏనుగు కుక్కని కాపాడుతున్న నిజమైన దృశ్యాలా? కాదు, ఇది AI-జనరేటెడ్ వీడియో