ಸೋಮವಾರ, ನವೆಂಬರ್ 10, 2025 ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟದ ಸುದ್ದಿ ಹೊರಬೀಳುತ್ತಿದ್ದಂತೆ, ಸ್ಫೋಟವನ್ನು ತೋರಿಸುವುದಾಗಿ ಹೇಳಿಕೊಳ್ಳುವ ಹಲವಾರು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು. ಇದೀಗ ದೆಹಲಿ ಸ್ಫೋಟದ ನಂತರ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗುತ್ತಿರುವುದನ್ನು ತೋರಿಸುವ ಫೋಟೋ ಹರಿದಾಡುತ್ತಿದೆ.
ಫೇಸ್ಬುಕ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡು, ‘‘ನವದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಸಂಭವಿಸಿದೆ. ಹಲವಾರು ವಾಹನಗಳು ಬೆಂಕಿಗೆ ಆಹುತಿ, 8 ಜನರು ಸಾವನ್ನಪ್ಪಿದ್ದಾರೆ, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ದೆಹಲಿ ಪೊಲೀಸರು, ಅಗ್ನಿಶಾಮಕ ದಳ ಮತ್ತು ವಿಶೇಷದಳ ಸ್ಥಳಕ್ಕೆ ಧಾವಿಸಿವೆ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಒಬ್ಬ ಶಂಕಿತನನ್ನು ಬಂಧಿಸಲಾಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2014 ರಲ್ಲಿ ಹಿಜ್ಬೊಲ್ಲಾ ಭದ್ರಕೋಟೆಯಾದ ಬೈರುತ್‌ನ ಹರೆಟ್ ಹ್ರೈಕ್ ಪ್ರದೇಶದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಚಿತ್ರವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಜನವರಿ 2, 2014 ರ ದಿ ಗಾರ್ಡಿಯನ್ ವರದಿ ಕಂಡುಬಂತು. ಇದರಲ್ಲಿ ಅದೇ ವೈರಲ್ ಫೋಟೋ ಕೂಡ ಇದೆ. ‘‘ದಕ್ಷಿಣ ಬೈರುತ್‌ನ ಹಿಜ್ಬೊಲ್ಲಾ ಭದ್ರತಾ ವಲಯದ ಬಳಿ ಪ್ರಬಲ ಕಾರ್ ಬಾಂಬ್ ಸ್ಫೋಟಗೊಂಡಿದ್ದು, ಜುಲೈನಿಂದ ಉಗ್ರಗಾಮಿ ಗುಂಪಿನ ಹೃದಯಭಾಗದ ಮೇಲೆ ನಡೆದ ಐದನೇ ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ.’’ ಎಂಬ ಮಾಹಿತಿ ಇದರಲ್ಲಿದೆ.
2014 ರ ಜನವರಿಯಲ್ಲಿ ದಿ ವಾಲ್ ಸ್ಟ್ರೀಟ್ ಜರ್ನಲ್ ಕೂಡ ಅದೇ ಫೋಟೋದೊಂದಿಗೆ ಸುದ್ದಿ ಪ್ರಕಟಿಸಿದ್ದು, "ಬೈರುತ್‌ನಲ್ಲಿ ಹಿಜ್ಬೊಲ್ಲಾ ಭದ್ರಕೋಟೆಯ ಮೇಲೆ ಬಾಂಬ್ ದಾಳಿ" ಎಂಬ ಶೀರ್ಷಿಕೆ ನೀಡಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಲೆಬನಾನ್ ರಾಜಧಾನಿಯ ಮತ್ತೊಂದು ಭಾಗದಲ್ಲಿ ನಡೆದ ಸ್ಫೋಟದಲ್ಲಿ ಶಿಯಾ ರಾಜಕೀಯ ಮತ್ತು ಉಗ್ರಗಾಮಿ ಗುಂಪನ್ನು ವಿರೋಧಿಸುತ್ತಿದ್ದ ರಾಜಕಾರಣಿಯೊಬ್ಬರು ಸಾವನ್ನಪ್ಪಿದ ಕೆಲವು ದಿನಗಳ ನಂತರ, ದಕ್ಷಿಣ ಬೈರುತ್‌ನ ಜನನಿಬಿಡ ಜಿಲ್ಲೆಯ ಹಿಜ್ಬೊಲ್ಲಾ ಭದ್ರಕೋಟೆಯ ಮೇಲೆ ಕಾರ್ ಬಾಂಬ್ ದಾಳಿ ನಡೆದಿದೆ. ಈ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದರು. ಲೆಬನಾನ್‌ನ ವಿಭಜಿತ ರಾಜಕೀಯ ವರ್ಣಪಟಲದಾದ್ಯಂತ ಅಧಿಕಾರಿಗಳು ದೇಶವು ಪಂಥೀಯ ಯುದ್ಧದ ಅಂಚಿನಲ್ಲಿದೆ ಎಂದು ಎಚ್ಚರಿಕೆ ನೀಡಿದರು, ಇದು 1975-90ರ ಅಂತರ್ಯುದ್ಧವನ್ನು ಗುರುತಿಸಿದ ರೀತಿಯ ಪ್ರತೀಕಾರದ ಹತ್ಯೆಗಳಿಗೆ ಬೆದರಿಕೆ ಹಾಕುತ್ತದೆ.
BBC ಹಾಗೂ Aljazeera ಕೂಡ ಜನವರಿ 2014 ರಲ್ಲಿ ಈ ಘಟನೆಯ ಕುರಿತು ವರದಿ ಮಾಡಿದ್ದು, ‘‘ಶಿಯಾ ಪ್ರಾಬಲ್ಯದ ಬೈರುತ್ ಉಪನಗರದಲ್ಲಿರುವ ಹಿಜ್ಬೊಲ್ಲಾ ಭದ್ರಕೋಟೆಯಲ್ಲಿ ಶಂಕಿತ ಆತ್ಮಹತ್ಯಾ ಕಾರ್ ಬಾಂಬರ್ ನಡೆಸಿದ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಬಹುಮಹಡಿ ಕಟ್ಟಡದ ಮುಂಭಾಗದಿಂದ ಜ್ವಾಲೆಗಳು ಉರಿಯುತ್ತಿರುವುದು ಕಂಡುಬಂದಿದ್ದು, ಜೊತೆಗೆ ದಟ್ಟವಾದ ಹೊಗೆ ಕಾಣಿಸಿಕೊಂಡಿವೆ. ದಕ್ಷಿಣ ಹರೆತ್ ಹ್ರೈಕ್ ಜಿಲ್ಲೆಯ ಅರಿಡ್ ಸ್ಟ್ರೀಟ್‌ನಲ್ಲಿ ನಡೆದ ಈ ಸ್ಫೋಟದಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ’’ ಎಂಬ ಮಾಹಿತಿ ಇದರಲ್ಲಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಇತ್ತೀಚಿನ ದೆಹಲಿ ಕಾರು ಸ್ಫೋಟದ ದೃಶ್ಯಗಳನ್ನು ತೋರಿಸುವುದಾಗಿ ಹೇಳಿಕೊಳ್ಳುವ ವೈರಲ್ ಫೋಟೋ 2014 ರಲ್ಲಿ ಹಿಜ್ಬೊಲ್ಲಾ ಭದ್ರಕೋಟೆಯಾದ ಬೈರುತ್‌ನ ಹರೆಟ್ ಹ್ರೈಕ್ ಪ್ರದೇಶದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.