Top Stories

Fact Check: ಭೋಪಾಲ್​ನಲ್ಲಿ 'ಪಾಕ್ ಜಿಂದಾಬಾದ್' ಘೋಷಣೆ ಕೂಗಿದವರನ್ನು ಪೊಲೀಸರು ಥಳಿಸಿ ಮೆರವಣಿಗೆ ಮಾಡಿದ್ದಾರೆಯೇ?

ಭೋಪಾಲ್ನಲ್ಲಿ "ಪಾಕಿಸ್ತಾನ ಜಿಂದಾಬಾದ್" ಘೋಷಣೆಗಳನ್ನು ಕೂಗಿದ್ದಕ್ಕಾಗಿ ಇವರನ್ನು ಥಳಿಸಲಾಗಿದೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

Vinay Bhat

ಕೆಲವರು ಹರಿದ ಬಟ್ಟೆಗಳನ್ನು ಧರಿಸಿದ ಗಾಯಗೊಂಡ ಪುರುಷರ ಗುಂಪನ್ನು ಪೊಲೀಸ್ ಅಧಿಕಾರಿಗಳು ಮೆರವಣಿಗೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಭೋಪಾಲ್​ನಲ್ಲಿ "ಪಾಕಿಸ್ತಾನ ಜಿಂದಾಬಾದ್" ಘೋಷಣೆಗಳನ್ನು ಕೂಗಿದ್ದಕ್ಕಾಗಿ ಇವರನ್ನು ಥಳಿಸಲಾಗಿದೆ ಎಂದು ಅನೇಕ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಭೋಪಾಲ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಹೇಳಿದ ದೇಶದ್ರೋಹಿಗಳ ಬೆಂಡೆತ್ತಿದ ಭೋಪಾಲ್ ಪೋಲೀಸರು’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗಿರುವ ವೀಡಿಯೊ ಭೂಪಾಲ್ ಪೊಲೀಸರು ದರೋಡೆಕೋರರನ್ನು ಮೆರವಣಿಗೆ ಮಾಡುತ್ತಿರುವುದನ್ನು ತೋರಿಸುತ್ತದೆ.

ನಿಜಾಂಶವನ್ನು ತಿಳಿಯಲು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಹಿಮ್ಮುಖವಾಗಿ ಹುಡುಕಿದಾಗ ಮೇ 12 ರಂದು ವಿಕೆ ನ್ಯೂಸ್ ಎಂಬ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ಸುದ್ದಿ ವರದಿ ನಮಗೆ ಸಿಕ್ಕಿತು. ವರದಿಯ ಪ್ರಕಾರ, ‘‘ಕುಖ್ಯಾತ ದರೋಡೆಕೋರ ಜುಬೈರ್ ಮೌಲಾನಾ ಮತ್ತು ಅವನ ಮೂವರು ಸಹಚರರನ್ನು ಭೋಪಾಲ್ ಪೊಲೀಸರು ಬಂಧಿಸಿದ್ದಾರೆ. ಅವನ ವಿರುದ್ಧ 55 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಭೋಪಾಲ್‌ನಲ್ಲಿ ಭೀತಿ ಮೂಡಿಸಲು ವಾಹನಗಳನ್ನು ಧ್ವಂಸಗೊಳಿಸಿ ಸಾರ್ವಜನಿಕವಾಗಿ ಗುಂಡು ಹಾರಿಸಿದ ಆರೋಪ ಅವನ ಮೇಲಿದೆ. ಪೊಲೀಸರು ಅವರಿಂದ ಅಕ್ರಮ ಬಂದೂಕುಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ. ವೈರಲ್ ವೀಡಿಯೊದಲ್ಲಿರುವ ಅದೇ ದೃಶ್ಯವನ್ನು ಇದರಲ್ಲೂ ಕಾಣಬಹುದು.

ಈ ಘಟನೆಯ ಕುರಿತು ನಮಗೆ ಹಲವಾರು ಸುದ್ದಿ ವರದಿಗಳು ಕೂಡ ಸಿಕ್ಕಿವೆ. ನವ್​​ಭಾರತ್ ಟೈಮ್ಸ್, ಮೇ 9 ರಂದು ವೈರಲ್ ವೀಡಿಯೊದಲ್ಲಿನ ಸ್ಕ್ರೀನ್ ಶಾಟ್​ನೊಂದಿಗೆ ಪ್ರಕಟಿಸಿದ ವರದಿಯ ಪ್ರಕಾರ, ‘‘ಭೋಪಾಲ್​ನಲ್ಲಿ ಕುಖ್ಯಾತ ದರೋಡೆಕೋರ ಜುಬೈರ್ ಮೌಲಾನಾ ಮತ್ತು ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನ ಶುಕ್ರವಾರ ನಡೆದಿದೆ. ಹಲವಾರು ಪೊಲೀಸ್ ತಂಡಗಳು ಒಟ್ಟಾಗಿ ಈ ಕ್ರಮ ಕೈಗೊಂಡವು. ಜುಬೈರ್ ಮೌಲಾನಾ ಕಳೆದ ಆರು ತಿಂಗಳಿನಿಂದ ತಲೆಮರೆಸಿಕೊಂಡಿದ್ದ. ಅವನು ಇತ್ತೀಚೆಗೆ ತನ್ನ ಶತ್ರುಗಳನ್ನು ಹೆದರಿಸಲು ಎರಡು ಬಾರಿ ಗುಂಡು ಹಾರಿಸಿದ್ದನು. ಆರೋಪಿಗಳಿಂದ ಒಂದು ಅಕ್ರಮ ಆಯುಧ, ನಾಲ್ಕು ಸಜೀವ ಕಾರ್ಟ್ರಿಡ್ಜ್‌ಗಳು ಮತ್ತು ಮೂರು ಹರಿತವಾದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ತಂಡ ಆರೋಪಿಯನ್ನು ಆ ಪ್ರದೇಶದ ಸುತ್ತಲೂ ಮೆರವಣಿಗೆ ಮಾಡಿ ಕರೆದುಕೊಂಡು ಹೋದರು’’ ಎಂದು ಬರೆಯಲಾಗಿದೆ.

ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಇದೇ ವರದಿಯನ್ನು ಮಾಡಿರುವ ಸುದ್ದಿಯನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಆದರೆ, ಯಾವುದೇ ಸುದ್ದಿ ವರದಿಯಲ್ಲಿ ಪಾಕಿಸ್ತಾನ ಅಥವಾ "ಪಾಕಿಸ್ತಾನ ಜಿಂದಾಬಾದ್" ಘೋಷಣೆಗಳ ಉಲ್ಲೇಖ ನಮಗೆ ಕಂಡುಬಂದಿಲ್ಲ.

ಹೀಗಾಗಿ, ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗಿರುವ ವೀಡಿಯೊ ಭೂಪಾಲ್ ಪೊಲೀಸರು ದರೋಡೆಕೋರರನ್ನು ಮೆರವಣಿಗೆ ಮಾಡುತ್ತಿರುವುದನ್ನು ತೋರಿಸುತ್ತದೆ ಮತ್ತು "ಪಾಕಿಸ್ತಾನ ಜಿಂದಾಬಾದ್" ಘೋಷಣೆಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Bihar polls – Kharge warns people against Rahul, Tejashwi Yadav? No, video is edited

Fact Check: കൊല്ലത്ത് ട്രെയിനപകടം? ഇംഗ്ലീഷ് വാര്‍ത്താകാര്‍ഡിന്റെ സത്യമറിയാം

Fact Check: அமெரிக்க இந்துக்களிடம் பொருட்கள் வாங்கக்கூடாது என்று இஸ்லாமியர்கள் புறக்கணித்து போராட்டத்தில் ஈடுபட்டனரா?

Fact Check: ಅಮೆರಿಕದ ಹಿಂದೂಗಳಿಂದ ವಸ್ತುಗಳನ್ನು ಖರೀದಿಸುವುದನ್ನು ಮುಸ್ಲಿಮರು ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆಯೇ?

Fact Check: జూబ్లీహిల్స్ ఉపఎన్నికల్లో అజరుద్దీన్‌ను అవమానించిన రేవంత్ రెడ్డి? ఇదే నిజం