Kannada

Fact Check: ಸಿಜೆಪಿ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ದೌರ್ಜನ್ಯ? ಸುಳ್ಳು, ವೈರಲ್ ವಿಡಿಯೊದ ಹಿನ್ನೆಲೆ ಇಲ್ಲಿದೆ

ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದೆ ಎಂದು ಹೇಳಿಕೊಂಡು ಪೊಲೀಸ್ ಸಿಬ್ಬಂದಿಯೊಂದಿಗೆ ಕೆಲವರು ವಾಗ್ವಾದ ನಡೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಕೆಲ ವ್ಯಕ್ತಿಗಳ ನಡುವೆ ವಾಗ್ವಾದ ನಡೆಯುತ್ತಿರುವುದು ಕಾಣಿಸುತ್ತದೆ.

vinay bhat

ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಅಕ್ಟೋಬರ್ 4 ರಂದು ಜಂತರ್ ಮಂತರ್‌ಗೆ 'ನಾಗರಿಕರ ಮೆರವಣಿಗೆ' ನಡೆಸಿದರು. ಇದರ ಮಧ್ಯೆ ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದೆ ಎಂದು ಹೇಳಿಕೊಂಡು ಪೊಲೀಸ್ ಸಿಬ್ಬಂದಿಯೊಂದಿಗೆ ಕೆಲವರು ವಾಗ್ವಾದ ನಡೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೊದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಕೆಲ ವ್ಯಕ್ತಿಗಳ ನಡುವೆ ವಾಗ್ವಾದ ನಡೆಯುತ್ತಿರುವುದು ಕಾಣಿಸುತ್ತದೆ. ಒಬ್ಬ ವ್ಯಕ್ತಿ ಪೊಲೀಸ್ ಸಿಬ್ಬಂದಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಹೇಳುತ್ತಿರುವುದು ದೃಶ್ಯದಲ್ಲಿದೆ. ಈ ವಿಡಿಯೊವನ್ನು ಹಂಚಿಕೊಂಡ ಫೇಸ್​ಬುಕ್ ಬಳಕೆದಾರರೊಬ್ಬರು, ‘‘ನೀವು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಪೊಲೀಸರಿಗೆ ಬೆದರಿಕೆ ಹಾಕುತ್ತಿರುವ ಜಿರಳೆಗಳು. ದೆಹಲಿ ಪೊಲೀಸರ ಸಮವಸ್ತ್ರವನ್ನು ಹರಿದು ಪೋಲೀಸರ ಮೇಲೆ ದೌರ್ಜನ್ಯ ಮಾಡುತ್ತಿರುವ ಜಿರಳೆಗಳು’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದ ವಿಡಿಯೊ ಅಲ್ಲ. ಬದಲಾಗಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿ ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಅಮರ ಉಜಾಲಾ ಅಕ್ಟೋಬರ್ 5ರಂದು ಪ್ರಕಟಿಸಿದ ವರದಿ ಸಿಕ್ಕಿತು. ಇದರಲ್ಲಿ ವೈರಲ್ ವಿಡಿಯೊದ ಸ್ಕ್ರೀನ್ ಶಾಟ್ ಕೂಡ ಇದೆ. ಭಾನುವಾರ ರಾತ್ರಿ ಗ್ರೇಟರ್ ನೋಯ್ಡಾ ವೆಸ್ಟ್‌ನ ಸರ್ವಿಸ್ ಲೇನ್‌ನಲ್ಲಿ ನಿಂತಿದ್ದ ಕಾರನ್ನು ಹೊರತೆಗೆಯುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಿವಾದ ಉಂಟಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರೊಂದಿಗೆ ಕೆಲವರು ತಳ್ಳಾಟ ನಡೆಸಿದ್ದರು.

ಪಾರ್ಕಿಂಗ್‌ನಿಂದ ವಾಹನ ಹೊರತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಎರಡೂ ಕಡೆಯವರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದರು. ಬಳಿಕ ಎರಡೂ ಕಡೆಯವರ ನಡುವೆ ಮಾತುಕತೆ ನಡೆದು ಪರಸ್ಪರ ಒಪ್ಪಂದವಾಗಿದ್ದು, ಯಾವುದೇ ಪಕ್ಷವೂ ಲಿಖಿತ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ತಳ್ಳಾಟಕ್ಕೆ ಒಳಗಾದ ಪೊಲೀಸ್ ಅಧಿಕಾರಿ ಆ ಜಿಲ್ಲೆಯಲ್ಲಿ ಕರ್ತವ್ಯದಲ್ಲಿರುವವರಲ್ಲ. ಅವರು ತಮ್ಮ ಪತ್ನಿಯನ್ನು ಆಸ್ಪತ್ರೆಗೆ ಭೇಟಿ ಮಾಡಲು ಗ್ರೇಟರ್ ನೋಯ್ಡಾ ವೆಸ್ಟ್‌ಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಪಾರ್ಕಿಂಗ್‌ನಿಂದ ವಾಹನ ತೆಗೆಯುವ ವಿಚಾರವಾಗಿ ವಿವಾದ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಲ್ಲಿದೆ.

ಅ. 5 ರಂದು ಟೈಮ್ಸ್ ನೌ ಪ್ರಕಟಿಸಿರುವ ವರದಿ ಪ್ರಕಾರ, ಗ್ರೇಟರ್ ನೋಯ್ಡಾ ವೆಸ್ಟ್‌ನ ಬಿಸ್ರಖ್ ಠಾಣೆ ವ್ಯಾಪ್ತಿಯ ಏಕಮೂರ್ತಿ ಗೋಲ್‌ಚಕ್ಕರ್ ಬಳಿಯ ಯುಫೋರಿಯಾ ಮಾಲ್ ಸಮೀಪ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಪಾರ್ಕಿಂಗ್‌ನಿಂದ ಕಾರು ಹೊರತೆಗೆಯುವ ವಿಚಾರವಾಗಿ ಎರಡು ಕಾರು ಸವಾರರ ನಡುವೆ ಮೊದಲು ವಾಗ್ವಾದ ನಡೆದಿತ್ತು. ಬಳಿಕ ಸ್ಥಳಕ್ಕೆ ಬಂದ ಸಬ್‌ಇನ್‌ಸ್ಪೆಕ್ಟರ್‌ ಜತೆ ಕೆಲ ಯುವಕರು ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಪೊಲೀಸ್ ಸಿಬ್ಬಂದಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಯುವಕನೊಬ್ಬ ಹೇಳುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ. ಪೊಲೀಸ್ ಪ್ರಕಾರ, ಎರಡೂ ಕಡೆಯವರನ್ನು ಠಾಣೆಗೆ ಕರೆದುಕೊಂಡು ಹೋಗಲಾಗಿದ್ದು, ಬಳಿಕ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಯಾವುದೇ ಪಕ್ಷವೂ ಲಿಖಿತ ದೂರು ನೀಡಿಲ್ಲ ಎಂದು ವರದಿ ತಿಳಿಸಿದೆ.

ಇನ್ನು ಆಜ್‌ತಕ್ ಕೂಡ ಇದೇ ವೈರಲ್ ವಿಡಿಯೊದ ಜೊತೆಗೆ ಘಟನೆಯ ವರದಿ ಮಾಡಿದ್ದು, ಗ್ರೇಟರ್ ನೋಯ್ಡಾದ ಮಾಲ್‌ವೊಂದರ ಸಮೀಪ ಪಾರ್ಕಿಂಗ್‌ನಲ್ಲಿ ಕಾರು ತೆಗೆಯುವ ವಿಚಾರವಾಗಿ ವಿವಾದ ಉಂಟಾಗಿ, ಕೆಲವರು ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ನಡೆಸಿದ್ದಾರೆ ಎಂದು ತಿಳಿಸಿದೆ. ವೈರಲ್ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಸಿಬ್ಬಂದಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಹೇಳುತ್ತಿರುವುದು ಕಾಣಿಸುತ್ತದೆ. ಪೊಲೀಸರು ಎರಡೂ ಕಡೆಯವರನ್ನು ಸ್ಥಳೀಯ ಠಾಣೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಎರಡೂ ಕಡೆಯವರು ರಾಜಿ ಮಾಡಿಕೊಂಡಿದ್ದಾರೆ. ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆಗೆ ಕಪಾಳಮೋಕ್ಷ ಮಾಡಲಾಗಿದೆ ಎಂಬ ಆರೋಪವನ್ನೂ ಪೊಲೀಸರು ತಳ್ಳಿಹಾಕಿದ್ದಾರೆ ಎಂದು ಆಜ್‌ತಕ್ ವರದಿ ಮಾಡಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಗ್ರೇಟರ್ ನೋಯ್ಡಾದಲ್ಲಿ ನಡೆದ ಪಾರ್ಕಿಂಗ್ ವಿವಾದದ ವಿಡಿಯೊವನ್ನು ಸದ್ಯದ ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದ ದೃಶ್ಯವೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Flydubai flight attack video viral? No, here are the facts

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: ராஜஸ்தான் தார் பாலைவன தேசிய நெடுஞ்சாலை எனப் பரப்பப்படும் காணொலி? உண்மை அறிக

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్

Fact Check: Video of 2026 student protests in France goes viral? No, it is old footage