Kannada

Fact Check: ಬಾಂಗ್ಲಾದೇಶದಲ್ಲಿ ರಸ್ತೆಗಳೆಲ್ಲ ಕೇಸರಿ ಮಯವಾಗಿದೆ ಎಂಬ ಸುಳ್ಳು ವೀಡಿಯೊ ವೈರಲ್

ಈ ವೀಡಿಯೊ ಹಳೆಯದಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ಸೊಹ್ರಾವರ್ದಿ ಪಾರ್ಕ್‌ನಲ್ಲಿ ಬಾಂಗ್ಲಾದೇಶ ಛಾತ್ರ ಲೀಗ್ (BCL) ಆಯೋಜಿಸಿದ್ದ ವಿದ್ಯಾರ್ಥಿಗಳ ರ್ಯಾಲಿ ಇದಾಗಿದೆ.

vinay bhat

ಕೇಸರಿ ಬಣ್ಣದ ಟೀ ಶರ್ಟ್‌ಗಳನ್ನು ಧರಿಸಿ ರಸ್ತೆಯಲ್ಲಿ ಮೆರವಣಿಗೆ ನಡೆಸುತ್ತಿರುವ ದೊಡ್ಡ ಜನಸಮೂಹದ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಬಾಂಗ್ಲಾದೇಶದಿಂದ ಬಂದಿದೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಶೇರ್ ಮಾಡಲಾಗಿದೆ. ಶೇಖ್ ಹಸೀನಾ ಅವರು ಆಗಸ್ಟ್ 5, 2024 ರಂದು ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೋಮು ದಾಳಿಗಳ ವಿರುದ್ಧ ಬಾಂಗ್ಲಾದೇಶಿ ಹಿಂದೂಗಳು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವೀಡಿಯೊ ಎಂದು ಇದು ಸೂಚಿಸುತ್ತದೆ.

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಕುಮಾರಿ ಧೃತಿ ಎಂಬವರು ಆಗಸ್ಟ್ 12, 2024 ರಂದು ಈ ವೀಡಿಯೊವನ್ನು ಹಂಚಿಕೊಂಡಿದ್ದು, ''ಬಾಂಗ್ಲಾದೇಶದ ಹಿಂದೂಗಳೆಲ್ಲಾ ಒಟ್ಟಾಗಿ ಬಾಂಗ್ಲಾದ ಗಲ್ಲಿಗಳಲ್ಲಿ - ಬೀದಿಬೀದಿಗಳಲ್ಲಿ - ರಸ್ತೆರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶದ ರಸ್ತೆಗಳಲ್ಲಿ #Bhagwa ಧ್ವಜಗಳು ಹಾರಾಡುತಿದೆ. ರಸ್ತೆಗಳೆಲ್ಲಾ ಕೇಸರಿ ಮಯವಾಗಿದೆ...'' ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪೋಸ್ಟ್‌ಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಇದು ಸುಳ್ಳು ಸುದ್ದಿ ಎಂದು ಕಂಡುಬಂದಿದೆ. ಈ ವೀಡಿಯೊ ಹಳೆಯದಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಮತ್ತು ಸೊಹ್ರಾವರ್ದಿ ಪಾರ್ಕ್‌ನಲ್ಲಿ ಬಾಂಗ್ಲಾದೇಶ ಛಾತ್ರ ಲೀಗ್ (BCL) ಆಯೋಜಿಸಿದ್ದ ವಿದ್ಯಾರ್ಥಿಗಳ ರ್ಯಾಲಿ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ sheikhtonmoymp ಎಂಬ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಸೆಪ್ಟೆಂಬರ್ 2, 2023 ರಂದು ಈ ವೀಡಿಯೊ ಅಪ್ಲೋಡ್ ಆಗಿರುವುದು ಕಂಡುಬಂತು. ಶೇಖ್ ಹಸೀನಾ ಮುಖ್ಯ ಅತಿಥಿಯಾಗಿದ್ದ ಸೊಹ್ರಾವರ್ದಿ ಪಾರ್ಕ್​ನಲ್ಲಿ ಬಾಂಗ್ಲಾದೇಶ ಛತ್ರ ಲೀಗ್ ಆಯೋಜಿಸಿದ್ದ ವಿದ್ಯಾರ್ಥಿ ರ್ಯಾಲಿ ಎಂದು ಶೀರ್ಷಿಕೆ ನೀಡಲಾಗಿದೆ.

ಇದೇ ಘಟನೆಯ ವೀಡಿಯೊವನ್ನು ಚಾನಲ್ 24 ಸೆಪ್ಟೆಂಬರ್ 1, 2023 ರಂದು ಹಂಚಿಕೊಂಡಿರುವುದು ಕಂಡುಬಂದಿದೆ. ವೀಡಿಯೊ ಶೀರ್ಷಿಕೆಯು "ಛಾತ್ರಾ ಲೀಗ್ ರ್ಯಾಲಿಯಲ್ಲಿ BNP ವಿರುದ್ಧ ಹೋರಾಡಲು ಪ್ರತಿಜ್ಞೆ ಮಾಡಲಾಗಿದೆ" ಎಂದು ನೀಡಲಾಗಿದೆ.

ದೇಶದ ವಿವಿಧ ಭಾಗಗಳಿಂದ ಬಿಸಿಎಲ್ ಮುಖಂಡರು ಮತ್ತು ಕಾರ್ಯಕರ್ತರು ವಿದ್ಯಾರ್ಥಿ ರ್ಯಾಲಿಯಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊಗೆ ಸಂಬಂಧಿಸಿದ ಶೀರ್ಷಿಕೆಯಲ್ಲಿ ತಿಳಿಸಲಾಗಿದೆ. "ಓನ್ಸ್ ಅಗೇನ್ ಶೇಖ್ ಹಸೀನಾ' ಎಂದು ಘೋಷಿಸುವ ಮೂಲಕ ಮತ್ತೊಮ್ಮೆ ಸರ್ಕಾರ ರಚಿಸಲು ಅವಾಮಿ ಲೀಗ್‌ಗೆ ಬೆಂಬಲ ನೀಡುವುದಾಗಿ ಛಾತ್ರ ಲೀಗ್ ಭರವಸೆ ನೀಡಿದೆ" ಎಂದು ಬರೆಯಲಾಗಿದೆ.

ಹೀಗಾಗಿ, ಬಾಂಗ್ಲಾದೇಶದಲ್ಲಿ ರಸ್ತೆಗಳೆಲ್ಲ ಕೇಸರಿ ಮಯವಾಗಿದೆ ಎಂಬ ವೈರಲ್ ವೀಡಿಯೊ ಹಳೆಯದ್ದಾಗಿದೆ ಮತ್ತು ಇದು ಬಾಂಗ್ಲಾದೇಶದ ಕೋಮು ಹಿಂಸಾಚಾರದ ವರದಿಗಳಿಗೆ ಸಂಬಂಧಿಸಿಲ್ಲ ಎಂದು ನಾವು ಖಚಿತಪಡಿಸುತ್ತೇವೆ.

Fact Check: Ragging in Tamil Nadu hostel – student assaulted? No, video is from Andhra

Fact Check: നേപ്പാള്‍ പ്രക്ഷോഭത്തിനിടെ പ്രധാനമന്ത്രിയ്ക്ക് ക്രൂരമര്‍‍ദനം? വീഡിയോയുടെ സത്യമറിയാം

Fact Check: இறைச்சிக்கடையில் தாயை கண்டு உருகும் கன்றுக்குட்டி? வைரல் காணொலியின் உண்மையை அறிக

Fact Check: ನೇಪಾಳಕ್ಕೆ ಮೋದಿ ಬರಬೇಕೆಂದು ಪ್ರತಿಭಟನೆ ನಡೆಯುತ್ತಿದೆಯೇ? ಇಲ್ಲ, ಸತ್ಯ ಇಲ್ಲಿದೆ

Fact Check: నేపాల్‌లో తాత్కాలిక ప్రధానిగా బాలేంద్ర షా? లేదు, నిజం ఇక్కడ తెలుసుకోండి