Kannada

Fact Check: ಇದು ಅಸ್ಸಾಂ ಪ್ರವಾಹದ ನಂತರ ಮೃತದೇಹಗಳ ದೃಶ್ಯವೇ? ಸುಳ್ಳು, ಸತ್ಯ ಇಲ್ಲಿದೆ

ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಮೃತದೇಹಗಳನ್ನು ತೋರಿಸುವ ವಿಡಿಯೋ ಎಂದು ಹೇಳಿಕೊಂಡು ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕೆಲವು ಮಹಿಳೆಯರು ನೀರಿನ ಹರಿವಿನಲ್ಲಿ, ಕೆಸರು ತುಂಬಿದ ರಸ್ತೆಗಳ ಮೇಲೆ ಹಾಗೂ ಮಣ್ಣಿನ ದಿಬ್ಬಗಳ ಬಳಿ ಚಲನೆಯಿಲ್ಲದೆ ಮಲಗಿರುವುದನ್ನು ಕಾಣಬಹುದು.

Vinay Bhat

(ವಿಷಯದ ಎಚ್ಚರಿಕೆ: ಈ ವರದಿಯಲ್ಲಿ ನೈಸರ್ಗಿಕ ವಿಕೋಪದಿಂದ ಸಂಭವಿಸಿದ ಹಲವು ಸಾವುಗಳ ಕುರಿತು ಮಾಹಿತಿ ಇದೆ. ಅಲ್ಲದೆ, ಸಾವುಗಳನ್ನು ನಾಟಕೀಯವಾಗಿ ತೋರಿಸಿರುವ ದೃಶ್ಯಗಳಿವೆ.)

ಅಸ್ಸಾಂನಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ಪ್ರವಾಹ ಉಂಟಾಗಿದ್ದು, ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಸಾವಿರಾರು ಜನರು ಸ್ಥಳಾಂತರಗೊಳ್ಳುವಂತಾಗಿದೆ. ಜುಲೈ 28ರಂದು ದಿ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯ ಪ್ರಕಾರ, ಅಸ್ಸಾಂನ ಏಳು ಜಿಲ್ಲೆಗಳಲ್ಲಿ ಪ್ರವಾಹದಿಂದ ಕನಿಷ್ಠ 75 ಮಂದಿ ಮೃತಪಟ್ಟಿದ್ದು, 3.32 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ.

ಈ ನಡುವೆ, ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಮೃತದೇಹಗಳನ್ನು ತೋರಿಸುವ ವಿಡಿಯೋ ಎಂದು ಹೇಳಿಕೊಂಡು ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕೆಲವು ಮಹಿಳೆಯರು ನೀರಿನ ಹರಿವಿನಲ್ಲಿ, ಕೆಸರು ತುಂಬಿದ ರಸ್ತೆಗಳ ಮೇಲೆ ಹಾಗೂ ಮಣ್ಣಿನ ದಿಬ್ಬಗಳ ಬಳಿ ಚಲನೆಯಿಲ್ಲದೆ ಮಲಗಿರುವುದನ್ನು ಕಾಣಬಹುದು.

ಫೇಸ್‌ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ಅಸ್ಸಾಂನಲ್ಲಿ ಭೀಕರ ಪ್ರವಾಹ! ಸಾವಿರಾರು ಜನರ ಬದುಕು ಅಸ್ತವ್ಯಸ್ತ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಸೌತ್ ಚೆಕ್ ಪರಿಶೀಲನೆಯಲ್ಲಿ ಈ ವಿಡಿಯೋ ಸುಳ್ಳು ಎಂಬುದು ತಿಳಿದುಬಂದಿದೆ. ಸ್ಕ್ರಿಪ್ಟೆಡ್ ಆಗಿ ಚಿತ್ರೀಕರಿಸಲಾದ ವಿಡಿಯೋವನ್ನು ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಮೃತದೇಹಗಳ ದೃಶ್ಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ದೃಶ್ಯಗಳಲ್ಲಿ ಹಲವು ಅನುಮಾನಾಸ್ಪದ ಅಂಶಗಳು

ವಿಡಿಯೋವನ್ನು ಪರಿಶೀಲಿಸಿದಾಗ ಹಲವು ಅಸಂಗತತೆಗಳು ಕಂಡುಬಂದವು. ವಿಡಿಯೋದಲ್ಲಿ ಕಾಣುವ ವ್ಯಕ್ತಿಗಳು ಮೃತಪಟ್ಟವರಂತೆ ಕಾಣಿಸುವುದಿಲ್ಲ. ಅವರಲ್ಲಿ ಹಲವರು ಅಸ್ವಾಭಾವಿಕ ರೀತಿಯಲ್ಲಿ ಮಲಗಿರುವುದು ಕಂಡುಬರುತ್ತದೆ. ಅಲ್ಲದೆ, ಎಲ್ಲಿಯೂ ರಕ್ತದ ಗುರುತುಗಳು ಕಾಣಿಸುವುದಿಲ್ಲ.

ಒಂದು ದೃಶ್ಯದಲ್ಲಿ, ರಸ್ತೆಯ ಮಧ್ಯದಲ್ಲಿ ಇಟ್ಟಿರುವ ಬಿದಿರಿನ ಮೇಲೆ ವ್ಯಕ್ತಿಯೊಬ್ಬರು ನಿಂತಿರುವುದನ್ನು ಕಾಣಬಹುದು. ಆದರೆ ಆ ಬಿದಿರು ನೆಲಕ್ಕೆ ಗಟ್ಟಿಯಾಗಿ ವಾಗಿರುವಂತೆ ಕಾಣುವುದಿಲ್ಲ. ಇದಲ್ಲದೆ, ಹಲವು ಜೋಡಿ ಚಪ್ಪಲಿಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದನ್ನು ಅಚ್ಚುಕಟ್ಟಾಗಿ ಇಟ್ಟಿರುವುದನ್ನೂ ಗಮನಿಸಲಾಗಿದೆ. ಪ್ರವಾಹದಂತಹ ಪರಿಸ್ಥಿತಿಯಲ್ಲಿ ಚಪ್ಪಲಿಗಳು ಈ ರೀತಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿರುವುದು ಸಹಜವಾಗಿ ಕಾಣುವುದಿಲ್ಲ.

ವೈರಲ್ ವಿಡಿಯೋದಲ್ಲಿನ ಪ್ರಮುಖ ದೃಶ್ಯಗಳ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಈ ವಿಡಿಯೋವನ್ನು ಮೂಲತಃ ಜುಲೈ 3ರಂದು ಪ್ರಕಟಿಸಲಾಗಿತ್ತು ಎಂಬುದು ಪತ್ತೆಯಾಯಿತು. Simran SK ಎಂಬ ಹ್ಯಾಂಡಲ್‌ನಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಈ ಖಾತೆಯಲ್ಲಿ ಪ್ರಕಟಿಸಿರುವ ಇತರ ವಿಡಿಯೋಗಳನ್ನು ಪರಿಶೀಲಿಸಿದಾಗ, ಮನರಂಜನೆಗಾಗಿ ಇದೇ ರೀತಿಯ ನಾಟಕೀಯ ವಿಡಿಯೋಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.

ಅದೇ ಖಾತೆಯಲ್ಲಿ ಪ್ರಕಟಿಸಲಾದ ಮತ್ತೊಂದು ವಿಡಿಯೋದಲ್ಲಿ ಕೆಲವರು ನೆಲದ ಮೇಲೆ ಮೃತದೇಹಗಳಂತೆ ಮಲಗಿ ನಟಿಸುತ್ತಿರುವುದನ್ನು ಕಾಣಬಹುದು. ಇನ್ನು ಕೆಲವು ವಿಡಿಯೋಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ಮತ್ತು ಕೆಸರು ತುಂಬಿದ ಪ್ರದೇಶಗಳಲ್ಲಿ ಅವರು ಆಟವಾಡುತ್ತಿರುವುದೂ ಕಂಡುಬರುತ್ತದೆ.

ಈ ಖಾತೆಯಿಂದ ಕೊನೆಯದಾಗಿ ಜುಲೈ 28ರಂದು ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬರ ಮುಖಕ್ಕೆ ಕೆಸರು ಎರಚುತ್ತಿರುವುದನ್ನು ಕಾಣಬಹುದು. ಇದು ಹಾಸ್ಯಕ್ಕಾಗಿ ಮಾಡಲಾದ ವಿಡಿಯೋವಾಗಿದೆ. ಇದೇ ರೀತಿಯಲ್ಲಿ ಮನರಂಜನೆಗಾಗಿ ನಾಟಕೀಯವಾಗಿ ಚಿತ್ರೀಕರಿಸಲಾದ ಹಲವು ವಿಡಿಯೋಗಳು ಆ ಖಾತೆಯ ಗ್ಯಾಲರಿಯಲ್ಲಿ ಲಭ್ಯವಿವೆ.

ವೈರಲ್ ವಿಡಿಯೋದಲ್ಲಿ ಮೃತದೇಹಗಳಂತೆ ನಟಿಸುತ್ತಿರುವವರ ಮುಖಗಳು ಕ್ಯಾಮೆರಾಗೆ ಕಾಣಿಸುವುದಿಲ್ಲ. ಅವರು ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡಿರುವುದು ಅಥವಾ ಮುಚ್ಚಿಕೊಂಡಿರುವುದು ಕಂಡುಬರುತ್ತದೆ. ಹೀಗಾಗಿ, ವೈರಲ್ ವಿಡಿಯೋದಲ್ಲಿರುವ ವ್ಯಕ್ತಿಗಳು ಖಾತೆಯ ಇತರ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವವರೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಆದರೆ ಒಂದು ಸಾಮ್ಯತೆ ಗಮನಕ್ಕೆ ಬಂದಿದೆ. ಇತರ ವಿಡಿಯೋಗಳಲ್ಲಿಯೂ ಜನರು ಗುಂಪುಗಳಲ್ಲಿ ಕಾಣಿಸಿಕೊಂಡಿದ್ದು, ವೈರಲ್ ವಿಡಿಯೋದಲ್ಲಿಯೂ ಜನರು ಗುಂಪಿನಲ್ಲಿದ್ದಾರೆ. ಹೀಗಾಗಿ, ಇತರ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವವರೇ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿಗಳಾಗಿರುವ ಸಾಧ್ಯತೆಯಿದೆ.

ಅಸ್ಸಾಂನಲ್ಲಿ ಪ್ರವಾಹ ಯಾವಾಗ ಆರಂಭವಾಯಿತು?

ವರದಿಗಳ ಪ್ರಕಾರ, ಅಸ್ಸಾಂನಲ್ಲಿ ಇತ್ತೀಚಿನ ಪ್ರಮುಖ ಪ್ರವಾಹದ ಅಲೆ ಜುಲೈ 19-20ರ ಸುಮಾರಿಗೆ ಆರಂಭವಾಯಿತು. ಹಲವು ದಿನಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಮೇಲ್ಭಾಗದ ಅಸ್ಸಾಂನಲ್ಲಿರುವ ದಿಖೌ, ದಿಸಾಂಗ್ ಮತ್ತು ಧನ್ಸಿರಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿದವು. ಜುಲೈ 20ರಿಂದ ವ್ಯಾಪಕ ಪ್ರದೇಶಗಳು ಜಲಾವೃತವಾಗಿರುವುದು ಮತ್ತು ದೊಡ್ಡ ಪ್ರಮಾಣದಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿರುವ ಬಗ್ಗೆ ಮೊದಲ ವರದಿಗಳು ಬಂದವು.

ಆದರೆ ವೈರಲ್ ಆಗಿರುವ ವಿಡಿಯೋವನ್ನು ಜುಲೈ 3ರಂದು ಪ್ರಕಟಿಸಲಾಗಿದೆ. ಅಂದರೆ, ಜುಲೈ 19-20ರ ಸುಮಾರಿಗೆ ಆರಂಭವಾದ ಇತ್ತೀಚಿನ ಪ್ರವಾಹಕ್ಕೂ ಮುನ್ನವೇ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು.

ಹೀಗಾಗಿ, ವಿಡಿಯೋದಲ್ಲಿನ ದೃಶ್ಯಗಳು ನಾಟಕೀಯವಾಗಿ ಚಿತ್ರೀಕರಿಸಲ್ಪಟ್ಟಿರುವುದು ಮಾತ್ರವಲ್ಲದೆ, ಇತ್ತೀಚಿನ ಅಸ್ಸಾಂ ಪ್ರವಾಹ ಆರಂಭವಾಗುವುದಕ್ಕೂ ಮುನ್ನವೇ ಈ ವಿಡಿಯೋ ಪ್ರಕಟವಾಗಿತ್ತು. ಆದ್ದರಿಂದ, ಅಸ್ಸಾಂ ಪ್ರವಾಹದಲ್ಲಿ ಮೃತಪಟ್ಟವರ ಮೃತದೇಹಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮದ ಹೇಳಿಕೆ ಸುಳ್ಳು ಎಂದು ನಾವು ನಿರ್ಧರಿಸುತ್ತೇವೆ.

Fact Check: Muslim man harassed in public by two strangers in India? No, video is from Bangladesh

Fact Check: നേപ്പാളില്‍ പ്രളയത്തിനിടെ ഡാം തകരുന്ന ദൃശ്യം? വീഡിയോയുടെ സത്യമറിയാം

Fact Check: தவெக ஆட்சிக்கு வந்த மூன்று மாதங்களில் அமைச்சர் ஆதவ் அர்ஜூனா வீட்டில் அமலாக்கத்துறை சோதனை நடந்ததா? உண்மை என்ன

Fact Check: ಬ್ರಿಕ್ಸ್ ನಾಯಕರು ಸೆಲ್ಫಿಗೆ ಪೋಸ್ ನೀಡಿದ್ದಾರೆಯೇ? ಇಲ್ಲ, ವೈರಲ್ ಚಿತ್ರ ಎಐ ಸೃಷ್ಟಿಸಿದ್ದು

Fact Check: బంగ్లాదేశ్‌లో హిందూ ఉపాధ్యాయురాలిపై అత్యాచారం, హత్య చేసిన ముస్లిం వ్యక్తి? కాదు, ఇది స్క్రిప్టెడ్ వీడియో