ದೇಶದಲ್ಲಿ ಮಳೆಯ ರೌದ್ರನರ್ತನ ಇನ್ನೂ ಕಡಿಮೆ ಆಗಿಲ್ಲ. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯ ಕೇರಳದಲ್ಲೂ ವರುಣ ದೊಡ್ಡ ಅವಾಂತರ ಸೃಷ್ಟಿಸಿದ್ದಾನೆ. ಅದರಲ್ಲೂ ವಯನಾಡಿನ ಮುಂಡಕೈಯಲ್ಲಿ ಸಂಭವಿಸಿದ ದುರಂತದಲ್ಲಿ ಮನುಷ್ಯರಷ್ಟೇ ಅಲ್ಲ, ಸಾಕುಪ್ರಾಣಿಗಳು ಮತ್ತು ಇತರ ಜೀವಿಗಳು ನೆಲದಡಿಯಲ್ಲಿ ಹೂತುಹೋದವು. ದುರಂತದಿಂದ ಮನುಷ್ಯರು ಹೊರಬರುವ ದೃಶ್ಯಗಳ ಜೊತೆಗೆ ಸಾಕು ಪ್ರಾಣಿಗಳ ಕರುಣಾಜನಕ ದೃಶ್ಯಗಳೂ ಇವೆ. ಇದೀಗ ಮಣ್ಣು-ನೀರಿನ ನಡುವೆ ಮಂಗವೊಂದು ತನ್ನ ಮರಿ ಕೋತಿಯನ್ನು ಅಪ್ಪಿಕೊಂಡು ರಕ್ಷಿಸುತ್ತಿರುವ ವೀಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.
ಮಂಜುನಾಥ್ ಗುಡಿಹಳ್ಳಿ ಎಂಬ ಫೇಸ್ಬುಕ್ ಬಳಕೆದಾರರು ಆಗಸ್ಟ್ 6, 2024 ರಂದು ತಮ್ಮ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ಕೇರಳದ ವಯನಾಡಿನ ದುರಂತದಲ್ಲಿ ಮಂಗ ತಾಯಿ ತನ್ನ ಮಗುವನ್ನ ರಕ್ಷಣೆ ಮಾಡುವಂತೆ ಅಂಗಲಾಚುವ ದೃಶ್ಯ ಕಂಡು ಮನ ಮಿಡಿಯುವುವದರಲ್ಲಿ ಒಂದ್ ಮಾತ್ ಇಲ್ಲ....!' ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಕರ್ನಾಟಕದ ಪ್ರಸಿದ್ಧ ಡಿಜಿಟಲ್ ಮಾಧ್ಯಮ ವಿಜಯವಾಣಿ ಕೂಡ ಈ ಬಗ್ಗೆ ವರದಿ ಮಾಡಿದ್ದು, 'ಕೇರಳ ರಾಜ್ಯ ವಯನಾಡಿನಲ್ಲಿ ಇತ್ತೀಚೆಗೆ ನಡೆದ ವಿನಾಶದ ನಂತರ ಮಂಗವೊಂದು ತನ್ನ ಮರಿ ಕೋತಿಯನ್ನು ರಕ್ಷಿಸುತ್ತಿದೆ. ಈ ವಿಡಿಯೋ ಎಲ್ಲರ ಕಣ್ಣಲ್ಲೂ ನೀರು ತರಿಸುವುದು ಖಂಡಿತ ಹೌದು. ಕೆಸರಿನಲ್ಲಿ ಸಿಲುಕಿದ್ದ ಮಂಗನನ್ನು ಮಂಗವೊಂದು ರಕ್ಷಿಸುತ್ತಿರುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದವರೆಲ್ಲಾ ಅಮ್ಮನ ಪ್ರೀತಿಗಿಂತ ಪ್ರೀತಿ ಮತ್ತೊಂದಿಲ್ಲ ಅಂತ ಕಾಮೆಂಟ್ ಮಾಡುತ್ತಿದ್ದಾರೆ.' ಎಂದು ಬರೆಯಲಾಗಿದೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಸದ್ಯ ಹರಿದಾಡುತ್ತಿರುವ ವೀಡಿಯೊ ಹಳೇಯದ್ದಾಗಿದೆ. ಈ ವೀಡಿಯೊಕ್ಕು ವಯನಾಡು ಭೂಕುಸಿತಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸತ್ಯಶೋಧನೆಯ ವೇಳೆ ಸ್ಪಷ್ಟವಾಗಿದೆ.
ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯ ಈ ವೀಡಿಯೊ ಯಾವುದೇ ಹಿನ್ನೆಲೆ ಮಾಹಿತಿ ಅಥವಾ ಖಚಿತ ಮಾಹಿತಿಯನ್ನು ಹೊಂದಿಲ್ಲ. ವೀಡಿಯೊವು ವಾಟರ್‌ಮಾರ್ಕ್ ಅನ್ನು ಸಹ ಹೊಂದಿಲ್ಲದಿರುವುದರಿಂದ, ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಕಳೆದ ಕೆಲವು ವಾರದಲ್ಲಿ ಈ ವೀಡಿಯೊವನ್ನು ಹಲವಾರು ಖಾತೆಗಳು ಹಂಚಿಕೊಂಡಿರುವುದು ತಿಳಿದುಬಂದಿದೆ. ಆದರೆ, ವಯನಾಡ್‌ಗೆ ಸಂಬಂಧಿಸಿದ ಯಾವುದೇ ಸುದ್ದಿ ಮಾಧ್ಯಮ ಪುಟಗಳಲ್ಲಿ ಅಥವಾ ಇತರ ಕೀವರ್ಡ್‌ಗಳಲ್ಲಿ ಈ ವೀಡಿಯೊ ಕಂಡುಬಂದಿಲ್ಲ. ಹೀಗಾಗಿ ಈ ವೀಡಿಯೊ ಬೇರೆ ಸನ್ನಿವೇಶದ ಬಗ್ಗೆ ಇರಬಹುದೆಂಬ ಸುಳಿವು ಸಿಕ್ಕಿತು.
ವಯನಾಡ್ ಮುಂಡಕೈ ದುರಂತವು ಜುಲೈ 30, 2024 ರ ಮಂಗಳವಾರದ ಮುಂಜಾನೆ ಸಂಭವಿಸಿದೆ. ನಾವು ಇದಕ್ಕೂ ಮುನ್ನ ಈ ವಿಡಿಯೋ ಶೇರ್ ಆಗಿದೆಯೇ ಎಂದು ಪರಿಶೀಲಿಸಿದ್ದೇವೆ.
ಈ ವೀಡಿಯೊ ಕೂಡ ಯಾವುದೇ ಮೂಲ ಹಿನ್ನೆಲೆ ಶಬ್ದ ಅಥವಾ ಇತರ ವಾಟರ್‌ಮಾರ್ಕ್‌ಗಳನ್ನು ಹೊಂದಿಲ್ಲ. ಆದರೆ, ಜುಲೈ 28ರಂದು ಗಜೇಂಧರ್ ರೈ ಎಂಬ ಯೂಟ್ಯೂಬ್ ಖಾತೆಯಿಂದ ಶೇರ್ ಆಗಿರುವುದರಿಂದ ವಯನಾಡಿನಲ್ಲಿ ನಡೆದ ದುರಂತಕ್ಕೂ ಈ ದೃಶ್ಯಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಕಂಡುಕೊಂಡಿದ್ದೇವೆ.
ಹಾಗೆಯೆ ಜುಲೈ 29 ರಂದು, ಇದೇ ವೀಡಿಯೊವನ್ನು ಮತ್ತೊಂದು ಯೂಟ್ಯೂಬ್ ಚಾನೆಲ್‌ನಿಂದ ಹಂಚಿಕೊಂಡಿರುವುದು ಕಂಡುಬಂತು. ಇದರಲ್ಲಿ ನೀವು @binduchaudhary ಅವರ ಟಿಕ್‌ಟಾಕ್ ಐಡಿಯನ್ನು ನೋಡಬಹುದು.
ಭಾರತದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ದರಿಂದ ಈ ಖಾತೆಯನ್ನು ನಿಷೇಧಿಸದ ಕೆಲವು ದೇಶಗಳಿಂದ ಈ ವೀಡಿಯೊ ಬಂದಿದೆ.
ಇದರೊಂದಿಗೆ ಹರಿದಾಡುತ್ತಿರುವ ವೀಡಿಯೊ ಹಳೆಯದು ಎಂಬುದು ಸ್ಪಷ್ಟವಾಗಿದೆ. ಟಿಕ್‌ಟಾಕ್‌ನ ಇತರ ಹಲವು ಖಾತೆಗಳಲ್ಲಿ ಇದೇ ವೀಡಿಯೊ ಕಂಡುಬಂದಿದ್ದರೂ, ಯಾರೂ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡದ ಕಾರಣ ವೀಡಿಯೊದ ನೈಜ ಹಿನ್ನೆಲೆ ಸ್ಪಷ್ಟವಾಗಿಲ್ಲ.
ತೀರ್ಮಾನ:
ಹೀಗಾಗಿ ಮಂಗಗಳು ಕೆಸರಿನ ನಡುವಲ್ಲಿರುವ ದೃಶ್ಯ ವಯನಾಡಿನ ಮುಂಡಕೈ ದುರಂತದ ಪ್ರದೇಶವಲ್ಲ. ಮುಂಡಕೈ ದುರಂತ ಸಂಭವಿಸಿದ 30 ಜುಲೈ 2024 ಕ್ಕಿಂತ ಮುಂಚೆಯೇ ಈ ದೃಶ್ಯಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಭ್ಯವಿವೆ ಎಂದು ಸೌತ್ ಚೆಕ್ ತನಿಖೆಯಿಂದ ತಿಳಿದುಬಂದಿದೆ.