Kannada

Fact Check: ಜಂತರ್ ಮಂತರ್​ನಲ್ಲಿ ಗಲಭೆ ಎಬ್ಬಿಸಲು ಹಿಂದೂ ಸಂಘಟನೆಗೆ ಪೊಲೀಸ್ ಸಮವಸ್ತ್ರ ನೀಡಲಾಗಿದೆಯೇ? ಸುಳ್ಳು, ಸತ್ಯ ಇಲ್ಲಿದೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿರುವ ವರದಿಗಳ ನಡುವೆ, ಖಾಕಿ ಸಮವಸ್ತ್ರಗಳಿಂದ ತುಂಬಿರುವ ಕಾರಿನ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

vinay bhat

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿರುವ ವರದಿಗಳ ನಡುವೆ, ಖಾಕಿ ಸಮವಸ್ತ್ರಗಳಿಂದ ತುಂಬಿರುವ ಕಾರಿನ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂದೂ ಸಂಘಟನೆಗೆ ಖಾಕಿ ಸಮವಸ್ತ್ರಗಳನ್ನು ನೀಡಲಾಗಿದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ ಎಂದು ಹಲವರು ಹೇಳುತ್ತಿದ್ದಾರೆ.

ವೈರಲ್ ವಿಡಿಯೊದಲ್ಲಿ ಕಾರಿನೊಳಗೆ ಮಡಚಿ ಇಡಲಾಗಿರುವ ಖಾಕಿ ಸಮವಸ್ತ್ರಗಳು ಮತ್ತು ಇತರ ಕೆಲವು ಸಮವಸ್ತ್ರಗಳು ಕಂಡುಬರುತ್ತವೆ. ವ್ಯಕ್ತಿಯೊಬ್ಬರು ಕಾರಿನ ಬಾಗಿಲು ತೆರೆದಾಗ ಒಳಗಿರುವ ಸಮವಸ್ತ್ರಗಳು ಮತ್ತು ಇತರ ವಸ್ತುಗಳು ಕಾಣಿಸುತ್ತವೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ಜಂತರ್ ಮಂತರ್ನಲ್ಲಿ ಗಲಭೆಗಳನ್ನು ಎಬ್ಬಿಸಿ ರಕ್ತಪಾತ ಹರಿಸಲು ಸಂಗಿ ಹಿಂದುತ್ವ ಮತಾಂಧ ಭಯೋತ್ಪಾದಕ ದೇಶದ್ರೋಹಿಗಳು ಯಾವ ರೀತಿ ತಯಾರಾಗುತ್ತಿದ್ದಾರೆ ಅಂತ ನೋಡಿ ಫ್ರೆಂಡ್ಸ್. ಗಲಭೆಗಳನ್ನು, ಮರಣಹೋಮಗಳನ್ನ ಯಾವ ರೀತಿ ಮಾಡಿ ದೇಶವನ್ನ ಸ್ಮಶಾನವನ್ನಾಗಿ ಮಾಡಬೇಕು ಅನ್ನೋದು ಆ ದುಷ್ಟ ಸಂಘದ ಸಂಸ್ಕಾರಿ ರಕ್ತದಲ್ಲೇ ಬಂದಿದೆಯಲ್ಲ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೊ ಪಶ್ಚಿಮ ಬಂಗಾಳದ್ದಾಗಿದ್ದು, ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಆಗ ವಿಡಿಯೊದಲ್ಲಿ ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಿರುವುದು ಕೇಳಿಸುತ್ತದೆ. ಇದನ್ನು ಗಮನಿಸಿದಾಗ ವಿಡಿಯೊ ಪಶ್ಚಿಮ ಬಂಗಾಳದ್ದಾಗಿರಬಹುದು ಎಂದು ನಮಗೆ ಅನುಮಾನ ಮೂಡಿತು. ಬಳಿಕ ವಿಡಿಯೊದ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ರಾಕೇಶ್ ಸರ್ಕಾರ್ ಎಂಬ ಫೇಸ್‌ಬುಕ್ ಬಳಕೆದಾರರು ಅಕ್ಟೋಬರ್ 9ರ ಪೋಸ್ಟ್‌ನಲ್ಲಿ ಇದೇ ವಿಡಿಯೊ ಕಂಡುಬಂದಿತು.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಾಗ್ದಾ ಎಂಬ ಸ್ಥಳದ ವಿಡಿಯೊ ಇದಾಗಿದೆ ಎಂದು ಆ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಪೋಸ್ಟ್‌ನಲ್ಲಿ ‘#WBP’, ‘#wbppolice’ ಮತ್ತು ‘West Bengal Police’ ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಬಳಸಲಾಗಿದೆ. ರಾಕೇಶ್ ಅವರು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ, ಇವು ಪಶ್ಚಿಮ ಬಂಗಾಳ ಪೊಲೀಸರಿಗೆ ಹೊಸದಾಗಿ ನೇಮಕಗೊಳ್ಳುತ್ತಿರುವವರ ಸಮವಸ್ತ್ರಗಳು ಎಂದು ಬರೆದಿದ್ದಾರೆ.

ರಾಕೇಶ್ ಅವರ ಫೇಸ್‌ಬುಕ್ ಖಾತೆಯನ್ನು ಪರಿಶೀಲಿಸಿದಾಗ ಅವರ ಮುಖಪುಟದ ಚಿತ್ರದಲ್ಲಿ ಪಶ್ಚಿಮ ಬಂಗಾಳ ಪೊಲೀಸರ ಲಾಂಛನ ಕಾಣಿಸುತ್ತದೆ. ಅವರ ಪ್ರೊಫೈಲ್‌ನ ಪರಿಚಯ ವಿಭಾಗದಲ್ಲಿರುವ ಮಾಹಿತಿಯ ಪ್ರಕಾರ, ಅವರು 24 ಪರಗಣ ಜಿಲ್ಲೆಯ ಬನಗಾಂವ್ ನಗರದಲ್ಲಿ ವಾಸಿಸುತ್ತಿದ್ದಾರೆ.

ಹಾಗೆ ಇವರು ಅಕ್ಟೋಬರ್ 1ರಂದು ಅವರು ಮತ್ತೊಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಕೆಲವು ಜನರು ಸಾಲಾಗಿ ನಿಂತಿದ್ದು, ವ್ಯಕ್ತಿಯೊಬ್ಬರು ಅವರಿಂದ ಒಬ್ಬೊಬ್ಬರಾಗಿ ನೋಂದಣಿ ಪುಸ್ತಕದಲ್ಲಿ ಮಾಹಿತಿ ಬರೆಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ಆ ಪೋಸ್ಟ್‌ನ ಬಂಗಾಳಿ ಕ್ಯಾಪ್ಶನ್‌ನ ಕನ್ನಡ ಅನುವಾದ ಹೀಗಿದೆ: ‘‘ಇಂದು ಬನಗಾಂವ್ ಪೊಲೀಸ್ ಇಲಾಖೆಗೆ ಆಯ್ಕೆಯಾದ ಅಭ್ಯರ್ಥಿಗಳ ಸಮವಸ್ತ್ರದ ಅಳತೆ ಪಡೆಯಲಾಯಿತು.’’

ಇಷ್ಟೇ ಅಲ್ಲದೆ ವೈರಲ್ ವಿಡಿಯೊ ಜಂತರ್ ಮಂತರ್ ಪ್ರತಿಭಟನೆಗೆ ಲಿಂಕ್ ಮಾಡಿ ವೈರಲ್ ಆಗುತ್ತಿದೆ ಎಂದು ಅರಿತ ರಾಕೇಶ್, ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘‘ನಾನು ಕೆಲವು ದಿನಗಳ ಹಿಂದೆ ಕಾರಿನೊಳಗೆ ಖಾಕಿ ಬಣ್ಣದ ಪೊಲೀಸ್ ಸಮವಸ್ತ್ರಗಳನ್ನು ಮಡಚಿ ಇಟ್ಟಿರುವ ವಿಡಿಯೊ ಹಂಚಿಕೊಂಡಿದ್ದೆ. ಈ ಸಮವಸ್ತ್ರಗಳು ಪಶ್ಚಿಮ ಬಂಗಾಳ ಪೊಲೀಸರಿಗೆ ಹೊಸದಾಗಿ ನೇಮಕಗೊಂಡವರಿಗಾಗಿ ಸಿದ್ಧಪಡಿಸಿರುವ ಸಮವಸ್ತ್ರಗಳಾಗಿವೆ. ನಾನು ಇತ್ತೀಚೆಗೆ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದು, ಈ ವಿಡಿಯೊವನ್ನು ನಾನೇ ಚಿತ್ರೀಕರಿಸಿದ್ದೇನೆ. ಈ ವಿಡಿಯೊ ದೆಹಲಿಯ ಜಂತರ್ ಮಂತರ್‌ನದ್ದಲ್ಲ; ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯದ್ದು’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ಜಂತರ್ ಮಂತರ್‌ನಲ್ಲಿ ಪೊಲೀಸರ ಸಮವಸ್ತ್ರ ಧರಿಸಿದ ಸಾಮಾನ್ಯ ನಾಗರಿಕರು ಇದ್ದರೇ ಎಂಬುದನ್ನು ನಾವು ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ. ಆದರೆ, ಪಶ್ಚಿಮ ಬಂಗಾಳದ ವಿಡಿಯೊವೊಂದನ್ನು ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗುತ್ತಿರು ವಿಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Delhi Police open fire on Rahul Gandhi’s protest rally? No, here are the facts

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: தமிழ்நாட்டில் மகளிர் இலவசப் பேருந்தில் பெண்கள் சண்டையிட்டுத் தாக்கியதாகப் பரவும் காணொலியின் உண்மைப் பின்னணி?

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్

Fact Check: ഇത് ജന്തര്‍ മന്തറില്‍ എത്തിയ പ്രതിഷേധക്കാരല്ല; ഫോട്ടോയുടെ സത്യമറിയാം