Kannada

Fact Check: ಮತ ಕಳ್ಳತನ ವಿರುದ್ಧದ ರ್ಯಾಲಿಯಲ್ಲಿ ಶಾಲಾ ಮಕ್ಕಳಿಂದ ಬಿಜೆಪಿ ಜಿಂದಾಬಾದ್ ಘೋಷಣೆ?

ಮತ ಕಳ್ಳತನ ವಿರುದ್ಧದ ರ್ಯಾಲಿಯ ಸಮಯದಲ್ಲಿ, ಶಾಲಾ ಮಕ್ಕಳು ಬಿಜೆಪಿ ಜಿಂದಾಬಾದ್ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

Vinay Bhat

ಆಗಸ್ಟ್ 7 ರಂದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯ ಮೂಲಕ ಚುನಾವಣಾ ಆಯೋಗವನ್ನು ಮತ ಕಳ್ಳತನ ಎಂದು ಆರೋಪಿಸಿದರು. ಇದಾದ ನಂತರ, ದೇಶಾದ್ಯಂತ ಈ ವಿಷಯದ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಈ ವಿಷಯದ ಕುರಿತು ರಾಹುಲ್ ಗಾಂಧಿಯವರ ಮತದಾರ ಅಧಿಕಾರ ಯಾತ್ರೆ ಬಿಹಾರದಲ್ಲಿ ನಡೆಯುತ್ತಿದೆ, ಇದರಲ್ಲಿ ಕಾಂಗ್ರೆಸ್ ಪಕ್ಷದ ಅನೇಕ ದೊಡ್ಡ ನಾಯಕರು ಭಾಗವಹಿಸುತ್ತಿದ್ದಾರೆ. ಆಗಸ್ಟ್ 29 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಏತನ್ಮಧ್ಯೆ, ಮತ ಕಳ್ಳತನ ವಿರುದ್ಧದ ರ್ಯಾಲಿಯ ಸಮಯದಲ್ಲಿ, ಶಾಲಾ ಮಕ್ಕಳು ಬಿಜೆಪಿ ಜಿಂದಾಬಾದ್ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, ಹಳದಿ ಶಾಲಾ ಬಸ್‌ನಲ್ಲಿ ಕುಳಿತಿದ್ದ ಮಕ್ಕಳು ಪಕ್ಕದಲ್ಲಿ ಸಾಗುತ್ತಿದ್ದ ರ್ಯಾಲಿಯನ್ನು ನೋಡಿ ನಂತರ ಬಿಜೆಪಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕಾಣಬಹುದು. ರ್ಯಾಲಿಯನ್ನು ನಡೆಸುತ್ತಿರುವ ಕೆಲವರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು ಸಹ ಕೇಳಿಬರುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮತ ಕಳ್ಳತನದ ವಿರುದ್ಧ ರ್ಯಾಲಿ ನಡೆಯುತ್ತಿತ್ತು ಶಾಲಾ ಬಸ್‌ನಲ್ಲಿ ಕುಳಿತಿದ್ದ ಮಕ್ಕಳು ಬಿಜೆಪಿ ಜಿಂದಾಬಾದ್ ಮೋದಿ ಜಿ ಜಿಂದಾಬಾದ್ ಅವರ ಘೋಷಣೆಗಳನ್ನು ಕೂಗಿದರು ಮತಗಳನ್ನು ಹೇಗೆ ಕಳವು ಮಾಡಲಾಗುತ್ತದೆ. ನೋಡಿ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಶಾಲಾ ಮಕ್ಕಳು ಘೋಷಣೆ ಕೂಗುತ್ತಿರುವ ಈ ವೀಡಿಯೊ ಪಶ್ಚಿಮ ಬಂಗಾಳದ್ದಾಗಿದ್ದು, ಇದು ಸುಮಾರು ಮೂರು ವರ್ಷ ಹಳೆಯದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ‘ಬಿಜೆಪಿ ಜಿಂದಾಬಾದ್ ಸ್ಕೂಲ್ ಬಸ್’ ಎಂಬ ಕೀವರ್ಡ್ ಮೂಲಕ ಸರ್ಚ್ ನಡೆಸಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವರದಿ ನಮಗೆ ಕಂಡುಬಂದಿಲ್ಲ. ಬಳಿಕ ವೈರಲ್ ವೀಡಿಯೊದ ಕೆಲ ಕೀ ಫ್ರೇಮ್​ಗಳನ್ನು ಗೂಗಲ್ ಲೆನ್ಸ್​ನಲ್ಲಿ ಹುಡುಕಿದಾಗ, ಈ ವೀಡಿಯೊವನ್ನು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರ ಎಕ್ಸ್ ಹ್ಯಾಂಡಲ್‌ನಿಂದ 22 ನವೆಂಬರ್ 2022 ರಂದು ಪೋಸ್ಟ್ ಮಾಡಿರುವುದು ಕಂಡುಬಂತು.

ಪೋಸ್ಟ್‌ನ ಶೀರ್ಷಿಕೆಯಲ್ಲಿ, "ಸಿಲಿಗುರಿಯಲ್ಲಿ ಟಿಎಂಸಿ ರ್ಯಾಲಿಯನ್ನು ನೋಡಿದ ನಂತರ ಶಾಲಾ ಮಕ್ಕಳು ಬಿಜೆಪಿ ಜಿಂದಾಬಾದ್ ಘೋಷಣೆಗಳನ್ನು ಕೂಗಿದರು. ಅವರು ಕೇವಲ ಶಾಲಾ ಮಕ್ಕಳು, ಯಾರೂ ಅವರಿಗೆ ಘೋಷಣೆಗಳನ್ನು ಕೂಗಲು ಕಲಿಸಿಲ್ಲ, ಮತ್ತು ಅವರು ಇನ್ನೂ ಮತದಾನದ ವಯಸ್ಸಾಗಿಲ್ಲ" ಎಂದು ಬರೆಯಲಾಗಿದೆ. ಹೀಗಾಗಿ ಈ ವೀಡಿಯೊ ಸುಮಾರು ಮೂರು ವರ್ಷ ಹಳೆಯದು ಮತ್ತು ಇತ್ತೀಚಿನ ಮತ ಕಳ್ಳತನ ವಿವಾದಕ್ಕೆ ಸಂಬಂಧಿಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು.

ಇದೇವೇಳೆ, 22 ನವೆಂಬರ್ 2022 ರಂದು ಪಶ್ಚಿಮ ಬಂಗಾಳ ಬಿಜೆಪಿಯ ಎಕ್ಸ್​ ಖಾತೆಯಲ್ಲಿ ಕೂಡ ನಮಗೆ ಇದೇ ವೈರಲ್ ವೀಡಿಯೊ ಸಿಕ್ಕಿದೆ. ಇಲ್ಲಿಯೂ ಸಹ, ಈ ವೀಡಿಯೊ ಸಿಲಿಗುರಿಯದ್ದಾಗಿದೆ ಎಂದು ಹೇಳಲಾಗಿದೆ.

Kalimpong Online News ಎಂಬ ವೆಬ್​ಸೈಟ್​ನಲ್ಲಿ ಕೂಡ ನ. 22 2022 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿ ಆಗಿರುವುದು ನಮಗೆ ಕಂಡುಬಂದಿದ್ದು, ‘‘ಸಿಲಿಗುರಿಯಲ್ಲಿ ಆಡಳಿತಾರೂಢ ಟಿಎಂಸಿ ನಿನ್ನೆ ಆಯೋಜಿಸಿದ್ದ ಸಾರ್ವಜನಿಕ ರ್ಯಾಲಿಯಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಶಾಲಾ ಮಕ್ಕಳ ಗುಂಪೊಂದು "ಬಿಜೆಪಿ ಜಿಂದಾಬಾದ್" ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊ ಕ್ಲಿಪ್ ಅನ್ನು ಪ್ರದರ್ಶಿಸುವ ಮೂಲಕ ಈ ಪ್ರದೇಶದ ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ಅನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. "ಬಂಗಾಳವನ್ನು ವಿಭಜಿಸುವ ಪ್ರಯತ್ನಗಳನ್ನು" ವಿರೋಧಿಸಿ ಟಿಎಂಸಿ ನಿನ್ನೆ ರ್ಯಾಲಿಯನ್ನು ನಡೆಸಿ ಸಾರ್ವಜನಿಕ ಸಭೆ ನಡೆಸಿತು.’’ ಎಂಬ ಮಾಹಿತಿ ಇದರಲ್ಲಿದೆ.

ತನಿಖೆಯ ಸಮಯದಲ್ಲಿ, ಈ ವೀಡಿಯೊ 23 ನವೆಂಬರ್ 2022 ರಂದು ನ್ಯೂಸ್ 18 ಬಾಂಗ್ಲಾ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಕಂಡುಬಂದಿದೆ. ಈ ವೀಡಿಯೊದ ಶೀರ್ಷಿಕೆಯು, ‘‘ಸಿಲಿಗುರಿಯ ಶಾಲಾ ಮಕ್ಕಳು ನಗರದಲ್ಲಿ ತೃಣಮೂಲ ಕಾಂಗ್ರೆಸ್ ನಡೆಸಿದ ರ್ಯಾಲಿಯನ್ನು ವೀಕ್ಷಿಸಿದ ನಂತರ ಬಿಜೆಪಿ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು’’ ಎಂದು ಹೇಳುತ್ತದೆ. ಆದಾಗ್ಯೂ, ವೀಡಿಯೊದ ಶೀರ್ಷಿಕೆಯಲ್ಲಿ ಮತ ಕಳ್ಳತನದ ವಿಷಯವನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಿಜೆಪಿ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಿರುವ ಶಾಲಾ ಮಕ್ಕಳ ಈ ವೀಡಿಯೊ ಪಶ್ಚಿಮ ಬಂಗಾಳದ್ದು ಮತ್ತು ಸುಮಾರು ಮೂರು ವರ್ಷ ಹಳೆಯದು ಎಂಬುದು ನಮ್ಮ ತನಿಖೆಯಿಂದ ಸ್ಪಷ್ಟವಾಗಿದೆ. ಇತ್ತೀಚಿನ ಮತ ಕಳ್ಳತನ ವಿವಾದಕ್ಕು ಇದಕ್ಕೂ ಯಾವುದೇ ಸಂಬಂಧವಿಲ್ಲ.

Fact Check: Bihar polls – Kharge warns people against Rahul, Tejashwi Yadav? No, video is edited

Fact Check: കേരളത്തിലെ അതിദരിദ്ര കുടുംബം - ചിത്രത്തിന്റെ സത്യമറിയാം

Fact Check: சமீபத்திய மழையின் போது சென்னையின் சாலையில் படுகுழி ஏற்பட்டதா? உண்மை என்ன

Fact Check: ಹಿಜಾಬ್ ಕಾನೂನು ರದ್ದುಗೊಳಿಸಿದ್ದಕ್ಕೆ ಇರಾನಿನ ಮಹಿಳೆಯರು ಹಿಜಾಬ್‌ಗಳನ್ನು ಸುಟ್ಟು ಸಂಭ್ರಮಿಸಿದ್ದಾರೆಯೇ? ಸುಳ್ಳು, ಸತ್ಯ ಇಲ್ಲಿದೆ

Fact Check: వాట్సాప్, ఫోన్ కాల్ కొత్త నియమాలు త్వరలోనే అమల్లోకి? లేదు, నిజం ఇక్కడ తెలుసుకోండి