ಅಪೂರ್ಣವಾಗಿ ಡಾಂಬರೀಕರಣಗೊಂಡ ರಸ್ತೆಯ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ರಸ್ತೆಯಲ್ಲಿ ವಾಹನಗಳ ಟೈರ್‌ಗಳು ಮಾತ್ರ ಡಾಂಬರು ಹಾಕಿರುವ ಎರಡು ಪಟ್ಟಿಗಳ ಮೇಲೆ ಚಲಿಸುವಂತೆ ಕಾಣುತ್ತದೆ. ಈ ಚಿತ್ರ ಕರ್ನಾಟಕದ್ದು ಎಂದು ಪೋಸ್ಟ್‌ನಲ್ಲಿ ಹೇಳಿಕೊಳ್ಳಲಾಗಿದೆ. ಈ ಪೋಸ್ಟ್ ಹಂಚಿಕೊಳ್ಳುವ ಮೂಲಕ ಬಳಕೆದಾರರು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ವ್ಯಂಗ್ಯವಾಡುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ಫೋಟೋ ಹಂಚಿಕೊಂಡು, ‘‘ಬಿಟ್ಟಿ ಭಾಗ್ಯದಿಂದ ಖಜಾನೆ ಖಾಲಿ ಆಗುತ್ತಿದೆ ಆದರೂ ನಾವು ಅಭಿವೃದ್ದಿ ನಿಲ್ಲಿಸಲ್ಲ ದುಂದುವೆಚ್ಚ ಕಮ್ಮಿ ಮಾಡಿ ವಾಹನ ಚಕ್ರಗಳಿಗೆ ಹಾನಿ ಆಗದಂತೆ ಡಾಂಬರ್ ಹಾಕಿಸಿದ್ದೀವಿ. ನಾವು ಜನರ ಪರ’’ ಎಂದು ಬರೆದುಕೊಂಡಿದ್ದಾರೆ. (Archive)
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ತಿಳಿದುಬಂದಿದೆ. ಇದು ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ನಿರ್ಮಿಸಿದ ವಿಚಿತ್ರ ರಸ್ತೆಯ ಚಿತ್ರವಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಇದೇ ವೈರಲ್ ಚಿತ್ರ darik.bg ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವುದು ಕಂಡುಬಂತು. ಈ ಕುರಿತು ಲೇಖನವನ್ನು 2023ರ ಅಕ್ಟೋಬರ್ 13ರಂದು ಪ್ರಕಟಿಸಲಾಗಿದೆ.
ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ಚಿತ್ರವು ಬಲ್ಗೇರಿಯಾದ ಡ್ರಾಗಲೆವ್ಟ್ಸಿ ಪ್ರದೇಶದಲ್ಲಿರುವ ನೆಂಕೊ ಬಾಲ್ಕಾನ್ಸ್ಕಿ ರಸ್ತೆಗೆ ಸೇರಿದ್ದು ಎಂಬುದು ತಿಳಿದುಬಂತು. ಇಲ್ಲಿ ರಸ್ತೆಯ ಹೆಸರಿನಲ್ಲಿ ಡಾಂಬರಿನಿಂದ ನಿರ್ಮಿಸಲಾದ ಎರಡು ತೆಳುವಾದ ಪಟ್ಟಿಗಳು ಮಾತ್ರ ಕಂಡುಬರುತ್ತವೆ. ಇಬ್ಬರು ಕಾರ್ಮಿಕರು ಒಂದು ಬಕೆಟ್ ಹಿಡಿದುಕೊಂಡು ಬಂದು, ರೈಲು ಹಳಿಗಳಂತೆ ಕಾಣುವ ಪಟ್ಟಿಗಳಿಗೆ ಡಾಂಬರು ಸುರಿಯುತ್ತಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ರಸ್ತೆಗೆ ವಿಚಿತ್ರ ರೀತಿಯಲ್ಲಿ ಡಾಂಬರು ಹಾಕಿರುವುದಷ್ಟೇ ಅಲ್ಲದೆ, ಕೈಯಿಂದ ಮುಟ್ಟಿದರೂ ಡಾಂಬರು ಕಿತ್ತುಬರುತ್ತಿದೆ ಎಂಬ ಮಾಹಿತಿ ಇದರಲ್ಲಿದೆ.
ಮತ್ತಷ್ಟು ಹುಡುಕಾಟ ನಡೆಸಿದಾಗ, 2023ರಲ್ಲಿ ಪ್ರಕಟವಾದ ಈ ರಸ್ತೆಯ ಕುರಿತ ಹಲವು ಬಲ್ಗೇರಿಯಾದ ಮಾಧ್ಯಮ ವರದಿಗಳು ಲಭ್ಯವಾದವು. ಈ ವರದಿಗಳ ಪ್ರಕಾರ, ವೈರಲ್ ಚಿತ್ರವು ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿರುವ ರಸ್ತೆಯೊಂದಕ್ಕೆ ಸೇರಿದೆ.
ಬಲ್ಗೇರಿಯಾದ ಮಾಧ್ಯಮ ಸಂಸ್ಥೆ bTV ನ್ಯೂಸ್ ಈ ರಸ್ತೆಯ ಕುರಿತು ವಿಡಿಯೊವೊಂದನ್ನು ಪ್ರಕಟಿಸಿತ್ತು. ಅದರಲ್ಲಿ ವರದಿಗಾರರೊಬ್ಬರು ಈ ರಸ್ತೆಯಲ್ಲಿ ಕಾರು ಚಲಾಯಿಸುತ್ತಾ ಸ್ಥಳೀಯರೊಂದಿಗೆ ಮಾತನಾಡುವುದನ್ನು ಕಾಣಬಹುದು. ಈ ವರದಿಯಲ್ಲಿ ವೈರಲ್ ಪೋಸ್ಟ್‌ನಲ್ಲಿ ಕಾಣಿಸುವ ಅದೇ ರಸ್ತೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದರಿಂದ ಈ ಚಿತ್ರ ಕರ್ನಾಟಕದ ರಸ್ತೆಯದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಇದಲ್ಲದೆ, ಮತ್ತೊಂದು ಫೇಸ್‌ಬುಕ್ ಪುಟದಲ್ಲಿ 2023ರ ಅಕ್ಟೋಬರ್ 17ರಂದು ಈ ವೈರಲ್ ರಸ್ತೆಯ ಹಲವು ಚಿತ್ರಗಳನ್ನು ಹಂಚಿಕೊಳ್ಳಲಾಗಿತ್ತು. ಈ ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ಆ ಪ್ರದೇಶದ ನಕ್ಷೆಯೂ ಇದೆ. ಅದರಲ್ಲಿ ಬಲ್ಗೇರಿಯನ್ ಭಾಷೆಯಲ್ಲಿ ಈ ರಸ್ತೆ ಹಾಗೂ ಸುತ್ತಮುತ್ತಲಿನ ಇತರ ರಸ್ತೆಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ನಿರ್ಮಿಸಲಾಗಿರುವ ವಿಚಿತ್ರ ರಸ್ತೆಯ ಚಿತ್ರವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಮಿಸಿರುವ ರಸ್ತೆಯ ಚಿತ್ರವೆಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.