Kannada

Fact Check: ಇದು ತ್ರಿಪುರಾದಲ್ಲಿ ಬಿಎಸ್ಎಫ್ ಸಿಬ್ಬಂದಿಯ ಮೇಲೆ ದಾಳಿ ಮಾಡಿದವರ ಬಂಧನದ ವಿಡಿಯೊ ಅಲ್ಲ

ಈ ವಿಡಿಯೊದಲ್ಲಿ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ವೃದ್ಧೆಯೊಬ್ಬರನ್ನು ಬಲವಂತವಾಗಿ ಪೊಲೀಸ್ ವಾಹನಕ್ಕೆ ಕೂರಿಸುತ್ತಿರುವುದು ಕಂಡುಬರುತ್ತದೆ. ಅಲ್ಲದೆ, ಘಟನಾ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಗುಂಪುಗೂಡಿರುವುದನ್ನೂ ಕಾಣಬಹುದು.

vinay bhat

ನವೆಂಬರ್ 2ರಂದು ಬಾಂಗ್ಲಾದೇಶದ ಗಡಿಯ ಸಮೀಪವಿರುವ ತ್ರಿಪುರಾದ ಆಶಾಬಾರಿ ಪ್ರದೇಶದಲ್ಲಿ ಕಳ್ಳಸಾಗಣೆದಾರರ ಗುಂಪೊಂದು ಕೆಲವು ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಸಿಬ್ಬಂದಿಯ ಮೇಲೆ ದಾಳಿ ನಡೆಸಿತ್ತು. ವರದಿಗಳ ಪ್ರಕಾರ, ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ಬಳಿಕ ಪೊಲೀಸರು ಕೆಲವರನ್ನು ಮಂದಿಯನ್ನು ಬಂಧಿಸಿದ್ದರು. ಈ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಈ ವಿಡಿಯೊದಲ್ಲಿ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ವೃದ್ಧೆಯೊಬ್ಬರನ್ನು ಬಲವಂತವಾಗಿ ಪೊಲೀಸ್ ವಾಹನಕ್ಕೆ ಕೂರಿಸುತ್ತಿರುವುದು ಕಂಡುಬರುತ್ತದೆ. ಅಲ್ಲದೆ, ಘಟನಾ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಗುಂಪುಗೂಡಿರುವುದನ್ನೂ ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ತ್ರಿಪುರಾದಲ್ಲಿ BSF ಸಿಬ್ಬಂದಿಯ ಮೇಲೆ ದಾಳಿ ಮಾಡಿದವರನ್ನು ಆಯ್ದು ಬಂಧಿಸಲಾಗುತ್ತಿದೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯಲ್ಲಿ ಲ್ಯಾಂಡ್‌ಪೋರ್ಟ್ ಯೋಜನೆಗೆ ಸಂಬಂಧಿಸಿದ ಭೂ ಹೋರಾಟದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ಮತ್ತು ಪ್ರತಿಭಟನಾಕಾರರನ್ನು ಬಂಧಿಸಿದ ದೃಶ್ಯವಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೊದ ಪ್ರಮುಖ ಫ್ರೇಮ್‌ಗಳನ್ನು ಬಳಸಿ ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ನವೆಂಬರ್ 3ರಂದು ‘ಮನುಷೇರ್ ಮತಾಮತ್’ ಎಂಬ ಸುದ್ದಿ ಮಾಧ್ಯಮದಲ್ಲಿ ಇದೇ ವಿಡಿಯೊ ಪ್ರಕಟವಾಗಿರುವುದು ಕಂಡುಬಂತು.

ಈ ವರದಿಯ ಪ್ರಕಾರ, ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯ ಕಾಲ್ಚಿನಿಯ ಜೈಗಾಂವ್‌ನ ಗೋಟಿಬಾರಿ ಪ್ರದೇಶದಲ್ಲಿ ಪ್ರಸ್ತಾವಿತ ಲ್ಯಾಂಡ್‌ಪೋರ್ಟ್ ನಿರ್ಮಾಣದ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೂರ್ವಜರಿಂದ ಬಂದಿರುವ ಜಮೀನಿನ ಬದಲಿಗೆ ಪರ್ಯಾಯ ಜಮೀನು ನೀಡಬೇಕೆಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ನಾಲ್ಕು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ಅಧಿಕಾರಿಗಳು ಪೊಲೀಸ್ ಪಡೆ ಮತ್ತು ಅಗೆಯುವ ಯಂತ್ರಗಳೊಂದಿಗೆ ಸ್ಥಳಕ್ಕೆ ತೆರಳಿ ಜಮೀನನ್ನು ತೆರವುಗೊಳಿಸಲು ಮುಂದಾದಾಗ ವಾಗ್ವಾದ ಆರಂಭವಾಗಿತ್ತು. ಈ ವೇಳೆ ಬಿಲಾಸ್ ಒರಾಂವ್, ಮರಿಯಮ್ ಒರಾಂವ್ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದಲ್ಲದೆ, ಇದೇ ಘಟನೆಗೆ ಸಂಬಂಧಿಸಿದ ಇತರ ಕೆಲವು ಸುದ್ದಿ ವರದಿಗಳೂ ನಮಗೆ ಲಭ್ಯವಾದವು. ನವೆಂಬರ್ 2ರಂದು ‘ಜೈಗಾಂವ್ ಟುಡೇ’ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವಿಡಿಯೊ ಇರುವ ಸುದ್ದಿ ಪ್ರಕಟಿಸಿತ್ತು. ಈ ವರದಿಯ ಪ್ರಕಾರ, ಜೈಗಾಂವ್‌ನ ಗೋಟಿಬಾರಿಯಲ್ಲಿ ಲ್ಯಾಂಡ್‌ಪೋರ್ಟ್ ಯೋಜನೆಯ ವಿಚಾರವಾಗಿ ಉದ್ವಿಗ್ನತೆ ಉಂಟಾಗಿತ್ತು. ಜಮೀನಿನ ಬದಲಿಗೆ ಪರಿಹಾರ ಮತ್ತು ಪರ್ಯಾಯ ಜಮೀನು ನೀಡಬೇಕೆಂದು ಒತ್ತಾಯಿಸಿ ಐದು ತಿಂಗಳಿಂದ ನಡೆಯುತ್ತಿದ್ದ ಧರಣಿಯನ್ನು ಆಡಳಿತ ಮಂಡಳಿ ತೆರವುಗೊಳಿಸಿತ್ತು. ಈ ವೇಳೆ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಡಳಿತ ಮಂಡಳಿಯ ಕಾರ್ಯಾಚರಣೆಯ ಬಳಿಕವೂ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿತ್ತು.

ಜೈಗಾಂವ್ ವಾಯ್ಸ್ ನ್ಯೂಸ್ ಪ್ರಕಾರ, ಪಶ್ಚಿಮ ಬಂಗಾಳದ ಅಲಿಪುರ್ದೂರ್ ಜಿಲ್ಲೆಯ ಜೈಗಾಂವ್ ಗೋಟಿಬಾರಿ ಪ್ರದೇಶದಲ್ಲಿ ನವೆಂಬರ್ 3 ರಂದು, ಸ್ಥಳೀಯ ಬುಡಕಟ್ಟು ಜನರು ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಒತ್ತಾಯಿಸಿ ಹಲವಾರು ತಿಂಗಳುಗಳಿಂದ ಪ್ರಸ್ತಾವಿತ ಭೂ ಬಂದರಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ರಸ್ತೆಯನ್ನು ನಿರ್ಬಂಧಿಸಿದ್ದ ಪ್ರತಿಭಟನಾಕಾರರನ್ನು ತೆಗೆದುಹಾಕಲು ಪೊಲೀಸರು ಬಂದಾಗ, ಅವರು ಪ್ರತಿಭಟನಾಕಾರರೊಂದಿಗೆ ಘರ್ಷಣೆ ನಡೆಸಿದರು ಮತ್ತು ಪೊಲೀಸರು 11 ಜನರನ್ನು ಬಂಧಿಸಿದರು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ವಿಡಿಯೊಕ್ಕೂ ತ್ರಿಪುರಾದ ಬಿಎಸ್‌ಎಫ್ ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ಅಲಿಪುರ್ದುವಾರ್ ಜಿಲ್ಲೆಯ ಜೈಗಾಂವ್‌ನ ಗೋಟಿಬಾರಿಯಲ್ಲಿ ಪ್ರಸ್ತಾವಿತ ಲ್ಯಾಂಡ್‌ಪೋರ್ಟ್ ಯೋಜನೆಗೆ ಸಂಬಂಧಿಸಿದ ಭೂ ಹೋರಾಟದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ಮತ್ತು ಪ್ರತಿಭಟನಾಕಾರರನ್ನು ಬಂಧಿಸಿದ ದೃಶ್ಯ ಇದಾಗಿದೆ.

Fact Check: Tripura BSF attack–Video shows police action against accused? No, video is from Bangladesh

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: கொளத்தூர் தவெக எம்.எல்.ஏ வி.எஸ்.பாபு உடல்நலம் பெற்று வீடு திரும்பியதாகப் பரவும் செய்தி? உண்மை என்ன

Fact Check: భారత స్వదేశీ బుల్లెట్ రైలు వీడియో? కాదు, ఇది తైవాన్‌కు చెందినది

Fact Check: PayTM தீபாவளியையொட்டி ரூபாய் 1,000 தருவதாகப் பரவும் லிங்க? உண்மை என்ன