ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಕೆಲವು ಸ್ಕೂಬಾ ಡೈವರ್‌ಗಳು ಆಳವಾದ ನೀರಿನ ಅಡಿಗೆ ಹೋಗುವುದನ್ನು ಕಾಣಬಹುದು. ಬಳಿಕ ದೇವಾಲಯಗಳು ಮತ್ತು ಪ್ರತಿಮೆಗಳು ಸೇರಿದಂತೆ ಹಲವು ಬಗೆಯ ಆಕೃತಿಗಳನ್ನು ನೀರಿನ ಅಡಿಯಲ್ಲಿ ಇರುವುದನ್ನು ಇವರು ತೋರಿಸುತ್ತಾರೆ. ಇವುಗಳಲ್ಲಿ, ಶೇಷನಾಗದ ಮೇಲೆ ಮಲಗಿರುವ ವಿಷ್ಣುವಿನ ಬೃಹತ್ ಪ್ರತಿಮೆಯೂ ಕಂಡುಬರುತ್ತದೆ. ಸ್ಕೂಬಾ ಡೈವರ್‌ಗಳು ಸಹ ಪ್ರತಿಮೆಗೆ ನಮಸ್ಕರಿಸಿ ಅದರ ಪಾದಗಳನ್ನು ಮುಟ್ಟುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇಂಡೋನೇಷ್ಯಾ ಬಾಲಿಯಲ್ಲಿ ನೀರೊಳಗಿನ ವಿಷ್ಣು ದೇವಾಲಯ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ನಿಜವಲ್ಲ. ಬದಲಾಗಿ ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ವೀಡಿಯೊದ ಕೆಳಭಾಗದಲ್ಲಿ ‘@mbaiarts’ ಎಂಬ ವಾಟರ್‌ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ. ಬಳಿಕ ಗೂಗಲ್‌ನಲ್ಲಿ @mbaiarts ಎಂದು ಸರ್ಚ್ ಮಾಡಿದಾಗ ಈ ಬಳಕೆದಾರ ಹೆಸರಿನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನಮಗೆ ಸಿಕ್ಕಿತು. Mb Ai ಆರ್ಟ್ಸ್ ಇನ್‌ಸ್ಟಾಗ್ರಾಮ್ ಖಾತೆಯ ವಿವರಣೆಯಲ್ಲಿ "AI ಮೂಲಕ ಹಿಂದೂ ದೇವರುಗಳ ಸೌಂದರ್ಯವನ್ನು ಅನ್ವೇಷಿಸುವುದು" ಎಂದು ಬರೆಯಲಾಗಿದೆ.
ಈ ಖಾತೆಯನ್ನು ತನಿಖೆ ಮಾಡಿದಾಗ, ವೈರಲ್ ವೀಡಿಯೊವನ್ನು ಈ ಹ್ಯಾಂಡಲ್‌ನಿಂದ ಏಪ್ರಿಲ್ 9, 2025 ರಂದು ಪೋಸ್ಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವೀಡಿಯೊದೊಂದಿಗೆ ಈ ರೀತಿ ಕ್ಯಾಪ್ಶನ್ ನೀಡಲಾಗಿದೆ. ‘‘ಇದು AI ನಿಂದ ರಚಿಸಲ್ಪಟ್ಟಿದೆ. ವೀಡಿಯೊದಲ್ಲಿನ ಎಲ್ಲಾ ದೃಶ್ಯಗಳನ್ನು ಕಲಾತ್ಮಕ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ AI ರಚಿಸಿದೆ’’ ಎಂದು ಬರೆಯಲಾಗಿದೆ.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು AI ಪತ್ತೆ ವೇದಿಕೆ ಹೈವ್ ಮಾಡರೇಶನ್ ಮೂಲಕ ವೈರಲ್ ಕ್ಲಿಪ್‌ನ ಒಂದು ಭಾಗವನ್ನು ಹುಡುಕಿದ್ದೇವೆ. ಹೈವ್‌ನ ತನಿಖೆಯು ವೈರಲ್ ಕ್ಲಿಪ್ ಶೇ. 99.9 ರಷ್ಟು AI ನಿಂದ ರಚಿಸಲ್ಪಟ್ಟಿದೆ ಎಂದು ಹೇಳಿದೆ. ಹಾಗೆಯೆ ಮತ್ತೊಂದು AI ಪತ್ತೆ ಸಾಧನ WasItAI ನಲ್ಲಿ ವೈರಲ್ ವೀಡಿಯೊದ ಹಲವಾರು ಸ್ಕ್ರೀನ್‌ಶಾಟ್‌ಗಳನ್ನು ಸಹ ಪರಿಶೀಲಿಸಿದ್ದೇವೆ. ಇದು ಕೂಡ ಎಲ್ಲಾ ದೃಶ್ಯಗಳನ್ನು AI ನಿಂದ ರಚಿಸಲಾಗಿದೆ ಎಂದು ಹೇಳಿದೆ.
ಇನ್ನು ವೈರಲ್ ವೀಡಿಯೊಗೆ ಸಂಬಂಧಿಸಿದ ಹಕ್ಕಿನ ಬಗ್ಗೆ ನಾವು ಗೂಗಲ್ ಸರ್ಚ್ ನಡೆಸಿದ್ದೇವೆ. ಇಂಡೋನೇಷ್ಯಾದ ಬಾಲಿ ಸಮುದ್ರದಲ್ಲಿ ಶ್ರೀ ಮಹಾ ವಿಷ್ಣು ದೇವಾಲಯದ ಅಸ್ತಿತ್ವದ ಕುರಿತು ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಿದೆವು. ಆದಾಗ್ಯೂ, ಈ ಹಕ್ಕನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಪುರಾವೆಗಳು ಕಂಡುಬಂದಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಇಂಡೋನೇಷ್ಯಾದ ಬಾಲಿಯ ಸಮುದ್ರದಲ್ಲಿ ವಿಷ್ಣು ದೇವಾಲಯ ಎಂದು ವೈರಲ್ ಆಗುತ್ತಿರುವ ವೀಡಿಯೊ AI ಯಿಂದ ರಚಿತವಾದ ವೀಡಿಯೊ ಎಂದು ನಾವು ಖಚಿತವಾಗಿ ಹೇಳುತ್ತೇವೆ.