Kannada

Fact Check: ಇರಾನಿ ಗ್ಯಾಂಗ್ ಬಗ್ಗೆ ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆಂಬ ಸುದ್ದಿ ತಪ್ಪುದಾರಿಗೆಳೆಯುತ್ತಿದೆ

vinay bhat

ಇವರು ಗುಲ್ಬರ್ಗಾ ಮತ್ತು ಬೀದರ್​ನ ಇರಾನಿ ಗ್ಯಾಂಗ್‌ನ ಜನರು ಎಂಬ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿದೆ. ಈ ಚಿತ್ರವನ್ನು ಇತ್ತೀಚೆಗೆ ದೆಹಲಿ ಪೊಲೀಸರು ಎಚ್ಚರಿಕೆಯೊಂದಿಗೆ ಬಿಡುಗಡೆ ಮಾಡಿದ್ದಾರೆ. ಈ ಜನರು ಕಂಬಳಿ ಮಾರುವವರಂತೆ ನಟಿಸಿ ಜನರ ಮನೆಗಳಿಗೆ ತೆರಳಿ ಲೂಟಿ ಮಾಡುತ್ತಾರೆ ಎಂದು ದೆಹಲಿ ಪೊಲೀಸರು ಎಚ್ಚರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅನೇಕರು ಫೋಟೋ ಹಂಚಿಕೊಳ್ಳುತ್ತಿದ್ದಾರೆ.

ಲೈವ್ ನ್ಯೂಸ್ ಹಿಮಾಚಲ ಟಿವಿ ಫೇಸ್​ಬುಕ್ ಖಾತೆಯಲ್ಲಿ ಆಗಸ್ಟ್ 23, 2024 ರಂದು ಈ ವೈರಲ್ ಫೋಟೋವನ್ನು ಹಂಚಿಕೊಂಡು ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ಇವರು ಬೀದರ್ ಮತ್ತು ಗುಲ್ಬರ್ಗಾದ ಇರಾನ್ ಗ್ಯಾಂಗ್, ಬೆಡ್‌ಶೀಟ್ ಮಾರಾಟ ಮಾಡುವಂತೆ ನಟಿಸುತ್ತಿದ್ದಾರೆ. ದಯವಿಟ್ಟು ಗಮನಿಸಿ, ಅವರೆಲ್ಲರೂ ದರೋಡೆಕೋರರು. ಇವರು ಹಗಲಿನಲ್ಲಿ ಕಂಬಳಿ ಮಾರಾಟಗಾರರಂತೆ ನಟಿಸುವ ಮೂಲಕ ಜನರ ಬಳಿ ಬರುತ್ತಾರೆ, ಮನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಂತರ ಮನೆಯನ್ನು ದರೋಡೆ ಮಾಡುತ್ತಾರೆ, ಹೀಗಾಗಿ ಪ್ರತಿಯೊಬ್ಬರೂ ಇದನ್ನು ಆದಷ್ಟು ಶೇರ್ ಮಾಡಿಕೊಳ್ಳಿ. ದೆಹಲಿ ಪೊಲೀಸ್’’ ಎಂದು ಬರೆಯಲಾಗಿದೆ.

ಬೀದರ್ ಮತ್ತು ಗುಲ್ಬರ್ಗಾದ ಇರಾನ್ ಗ್ಯಾಂಗ್ ಮನೆಗಳನ್ನು ದರೋಡೆ ಮಾಡುವ ಕಂಬಳಿ ಮಾರಾಟಗಾರರಂತೆ ನಟಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ಕೂಡ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ ಇದು ಸತ್ಯಕ್ಕೆ ದೂರವಾಗಿದೆ ಎಂಬುದು ಕಂಡುಬಂದಿದೆ. ಈ ಫೋಟೋ ಮತ್ತು ಇದರಲ್ಲಿ ನೀಡಿರುವ ಮಾಹಿತಿ ಐದು ವರ್ಷದ ಹಿಂದಿನದ್ದಾಗಿದೆ. ಮಂಗಳೂರಿನ ಬಜ್ಪೆ ಪೊಲೀಸರು ಮನೆಗಳನ್ನು ದರೋಡೆ ಮಾಡಲು ಕಂಬಳಿ ಮಾರಾಟಗಾರರಂತೆ ಬರುತ್ತಿರುವ ಇರಾನಿನ ಗ್ಯಾಂಗ್ ಬಗ್ಗೆ 2019ರ ಜುಲೈನಲ್ಲಿ ಎಚ್ಚರಿಕೆ ನೀಡಿದ್ದ ಪೋಸ್ಟ್ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಹುಡುಕಿದೆವು. ಆಗ ಉದಯವಾಣಿ ವೆಬ್‌ಸೈಟ್‌ನಲ್ಲಿ ವೈರಲ್ ಕ್ಲೈಮ್‌ಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ಸುದ್ದಿಯನ್ನು 29 ಜುಲೈ 2019 ರಂದು ಪ್ರಕಟಿಸಲಾಗಿದೆ. ‘ಕಂಬಳಿ ಮಾರಾಟದ ನೆಪದಲ್ಲಿ ಬಂದಿರುವ ಇರಾನಿ ಗ್ಯಾಂಗ್‌ನ ಬಗ್ಗೆ ಬಜ್ಪೆ ಪೊಲೀಸರು ಎಚ್ಚರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಹಾಗೂ ಆ ಜಿಲ್ಲೆಯ ಇತರ ಪ್ರದೇಶಗಳಲ್ಲಿ ಈ ಗ್ಯಾಂಗ್ ಈಗಾಗಲೇ ಸಕ್ರಿಯವಾಗಿದೆ. ಹಗಲು ಹೊತ್ತಿನಲ್ಲಿ ಕಂಬಳಿ ಮಾರುವವರಾಗಿ ಸಾರ್ವಜನಿಕರನ್ನು ಸಂಪರ್ಕಿಸಿ, ಮನೆ ಸಮೀಕ್ಷೆ ನಡೆಸಿ ನಂತರ ಮನೆ ಲೂಟಿ ಮಾಡುವುದು ಗ್ಯಾಂಗ್ ಸದಸ್ಯರ ವಿಧಾನವಾಗಿದೆ.’ ಎಂದು ಮಂಗಳೂರಿನ ಬಜ್ಪೆ ಪೊಲೀಸರು ಹೇಳಿರುವ ಮಾಹಿತಿ ಇದರಲ್ಲಿದೆ.

ಹಾಗೆಯೆ ಜುಲೈ 29, 2019 ರಂದು ಡೈಜಿ ವರ್ಲ್ಡ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಜನರು ಇರಾನ್ ಗ್ಯಾಂಗ್‌ನ ಸದಸ್ಯರು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು. ಹೊದಿಕೆ ಮಾರುವ ನೆಪದಲ್ಲಿ ಬೆಳಗ್ಗೆಯೇ ಮನೆಗಳಿಗೆ ನುಗ್ಗಿ ಇಡೀ ಮನೆಯನ್ನು ಶೋಧಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಇತರೆ ಸದಸ್ಯರು ಬಂದು ಮನೆ ದೋಚುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಲ್ಲಿದೆ.

ತನಿಖೆಯ ಸಮಯದಲ್ಲಿ, ಈ ಪೋಸ್ಟ್ 2019 ರಿಂದ ಅನೇಕ ರಾಜ್ಯಗಳ ಹೆಸರಿನಲ್ಲಿ ವೈರಲ್ ಆಗಿರುವುದನ್ನು ನಾವು ಕಂಡುಕೊಂಡಿದ್ದೇವೆ. 2019 ರಲ್ಲಿ, ಈ ಪೋಸ್ಟ್ ತೆಲಂಗಾಣ ಹೆಸರಿನಲ್ಲಿ ವೈರಲ್ ಆಗಿತ್ತು. ಆ ಸಮಯದಲ್ಲಿ, ಬಳಕೆದಾರರೊಬ್ಬರು ಹೈದರಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿ ಅದರ ಸತ್ಯಾಸತ್ಯತೆಯ ಬಗ್ಗೆ ಕೇಳಿದ್ದರು. ಆಗ ಪೊಲೀಸರು ಇದು ಪೋಸ್ಟ್ ನಕಲಿ ಎಂದು ಉತ್ತರಿಸಿದ್ದರು.

ಹೀಗಾಗಿ ಇರಾನ್ ಗ್ಯಾಂಗ್‌ನ ಹೆಸರಿನಲ್ಲಿ ವೈರಲ್ ಆಗುತ್ತಿರುವ ಸುದ್ದಿ ತಪ್ಪುದಾರಿಗೆಳೆಯುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ಫೋಟೋವನ್ನು 2019 ರಲ್ಲಿ ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದರು.

Fact Check: Man assaulting woman in viral video is not Pakistani immigrant from New York

Fact Check: സീതാറാം യെച്ചൂരിയുടെ മരണവാര്‍ത്ത ദേശാഭിമാനി അവഗണിച്ചോ?

Fact Check: மறைந்த சீதாராம் யெச்சூரியின் உடலுக்கு எய்ம்ஸ் மருத்துவர்கள் வணக்கம் செலுத்தினரா?

ఫ్యాక్ట్ చెక్: ఐకానిక్ ఫోటోను ఎమర్జెన్సీ తర్వాత ఇందిరా గాంధీకి సీతారాం ఏచూరి క్షమాపణలు చెబుతున్నట్లుగా తప్పుగా షేర్ చేశారు.

Fact Check: ಅಂಗಡಿಯನ್ನು ಧ್ವಂಸಗೊಳಿಸುತ್ತಿದ್ದವರಿಗೆ ಆರ್ಮಿಯವರು ಗನ್ ಪಾಯಿಂಟ್ ತೋರಿದ ವೀಡಿಯೊ ಭಾರತದ್ದಲ್ಲ