Kannada

Fact Check: ಬಿಜೆಪಿ ಸರ್ಕಾರ ಇರುವ ಬಿಹಾರದಲ್ಲಿ ಯುವತಿಯ ಅಪಹರಣ? ಇಲ್ಲ, ಇದು ಸ್ಕ್ರಿಪ್ಟ್ ಮಾಡಿದ ವಿಡಿಯೊ

ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಬಿಹಾರದಲ್ಲಿ ಯುವತಿಯೊಬ್ಬಳನ್ನು ಅಪಹರಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 28 ಸೆಕೆಂಡ್‌ಗಳ ಈ ವಿಡಿಯೊದಲ್ಲಿ, ನಂಬರ್ ಪ್ಲೇಟ್ ಮುಚ್ಚಿರುವ ಬೊಲೆರೊ ವಾಹನದಲ್ಲಿರುವ ಕೆಲವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳನ್ನು ಅಪಹರಿಸುವುದನ್ನು ಕಾಣಬಹುದು.

vinay bhat

ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಬಿಹಾರದಲ್ಲಿ ಯುವತಿಯೊಬ್ಬಳನ್ನು ಅಪಹರಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 28 ಸೆಕೆಂಡ್‌ಗಳ ಈ ವಿಡಿಯೊದಲ್ಲಿ, ನಂಬರ್ ಪ್ಲೇಟ್ ಮುಚ್ಚಿರುವ ಬೊಲೆರೊ ವಾಹನದಲ್ಲಿರುವ ಕೆಲವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳನ್ನು ಅಪಹರಿಸುವುದನ್ನು ಕಾಣಬಹುದು. ಈ ವೇಳೆ ಯುವತಿ ಅಪಹರಣಕಾರರ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನೊಬ್ಬನ ಕ್ಯಾಮೆರಾದಲ್ಲಿ ಈ ಸಂಪೂರ್ಣ ಘಟನೆ ಸೆರೆಯಾಗಿದೆ. ಈ ಸಂದರ್ಭದಲ್ಲಿ ಬೈಕ್ ಸವಾರ ಕೂಡ ಅಪಹರಣಕಾರರನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ಬಿಹಾರದಲ್ಲಿ ಭೇಟಿ ಪಡಾವೊ ಭೇಟಿ ಬಚಾವೋ ಬಿಜೆಪಿ ಅಧಿಕಾರದಲ್ಲಿರುವ ಕಡೆ ಹೆಣ್ಣುಮಕ್ಕಳಿಗೆ ರಕ್ಷಣೆ ಇದೆ ಎಂದು ಹೇಳುವವರಿಗೆ ಇದನ್ನ ಶೇರ್ ಮಾಡಿ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೊ ಸ್ಕ್ರಿಪ್ಟ್ ಮಾಡಿರುವುದು ಮತ್ತು ಇದನ್ನು ಪಶ್ಚಿಮ ಬಂಗಾಳದ ಕ್ರಿಯೇಟರ್‌ಗಳು ನಿರ್ಮಿಸಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವಿಡಿಯೊದ ಪ್ರಮುಖ ಫ್ರೇಮ್‌ಗಳನ್ನು ಬಳಸಿ ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಆಗ ‘ಇಸಾ ಸ್ಟಂಟ್’ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಕ್ಟೋಬರ್ 11ರಂದು ಅಪ್‌ಲೋಡ್ ಮಾಡಲಾಗಿದ್ದ ಇದೇ ವಿಡಿಯೊ ಲಭ್ಯವಾಯಿತು. ಆದರೆ, ವಿಡಿಯೊದೊಂದಿಗೆ ಹಂಚಿಕೊಂಡಿದ್ದ ಶೀರ್ಷಿಕೆಯಲ್ಲಿ ಯಾವುದೇ ಮಾಹಿತಿ ಇರಲಿಲ್ಲ.

ಆದರೆ, ಆ ಖಾತೆಯನ್ನು ಪರಿಶೀಲಿಸಿದಾಗ ವೈರಲ್ ವಿಡಿಯೊದಂತೆಯೇ ಇರುವ ಹಲವು ವಿಡಿಯೊಗಳು ಅಪ್‌ಲೋಡ್ ಆಗಿರುವುದು ಕಂಡುಬಂತು. ಅವುಗಳಲ್ಲಿ ಹಲವು ವಿಡಿಯೊಗಳಲ್ಲಿ ಅದೇ ಬೊಲೆರೊ ವಾಹನ, ಅದೇ ಬೈಕ್ ಮತ್ತು ವೈರಲ್ ವಿಡಿಯೊದಲ್ಲಿ ಯುವತಿಯನ್ನು ಅಪಹರಿಸುವಂತೆ ಕಾಣುವ ಅದೇ ವ್ಯಕ್ತಿಯೂ ಇದ್ದರು. ಈ ವಿಡಿಯೊಗಳನ್ನು ಗಮನಿಸಿದಾಗ ಅವು ನಾಟಕೀಯವಾಗಿ ಸಿದ್ಧಪಡಿಸಿರುವುದು ಸ್ಪಷ್ಟವಾಗಿ ಕಂಡುಬಂತು.

ನಮ್ಮ ಪರಿಶೀಲನೆಯ ವೇಳೆ, ಇಸಾ ಸ್ಟಂಟ್‌ನ ಯೂಟ್ಯೂಬ್ ಖಾತೆಯೂ ಲಭ್ಯವಾಯಿತು. ಈ ಖಾತೆಯಲ್ಲಿಯೂ ವೈರಲ್ ವಿಡಿಯೊದಂತೆಯೇ ಹಲವು ವಿಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿತ್ತು. ಯುವತಿಯ ಅಪಹರಣ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮತ್ತು ರಸ್ತೆ ಅಪಘಾತ ಮುಂತಾದ ಘಟನೆಗಳನ್ನು ಈ ವಿಡಿಯೊಗಳಲ್ಲಿ ತೋರಿಸಲಾಗಿದೆ. ಆದರೆ, ಈ ವಿಡಿಯೊಗಳ ವಿವರಣೆ ಹಾಗೂ ಯೂಟ್ಯೂಬ್ ಖಾತೆಯ ಪರಿಚಯದಲ್ಲಿ, ಇವೆಲ್ಲವನ್ನೂ ಮನರಂಜನೆಗಾಗಿ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿದೆ.

ನಾವು ಮೂಲ ವಿಡಿಯೊ ಅಪ್ಲೋಡ್ ಆಗಿರುವ ಇಸಾ ಸ್ಟಂಟ್ ಅವರನ್ನು ಸಂಪರ್ಕಿಸಿದೆವು. ಆಗ ಅವರು, ತಾವು ತಂಡವಾಗಿ ಸ್ಕ್ರಿಪ್ಟ್ ಮಾಡಲಾದ ವಿಡಿಯೊಗಳನ್ನು ನಿರ್ಮಿಸುತ್ತೇವೆ ಎಂದು ತಿಳಿಸಿದರು. ಯುವತಿಯ ಅಪಹರಣದ ವೈರಲ್ ವಿಡಿಯೊ ಕೂಡ ಸ್ಕ್ರಿಪ್ಟ್ ಮಾಡಿರುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಿಜೆಪಿ ಅಧಿಕಾರದಲ್ಲಿರುವ ಬಿಹಾರದಲ್ಲಿ ಯುವತಿಯೊಬ್ಬಳನ್ನು ಅಪಹರಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ಈ ವಿಡಿಯೊ ಸ್ಕ್ರಿಪ್ಟ್ ಮಾಡಿರುವುದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Video shows massive crowd at Rahul Gandhi’s ‘Chalo Dilli’ rally? No, unrelated video is viral

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: தவெக-விலிருந்து நாஞ்சில் சம்பத் விலகியதாகப் பரவும் செய்தி? உண்மை என்ன

Fact Check: ఆంధ్రప్రదేశ్‌లో స్థానిక సంస్థల ఎన్నికల నామినేషన్ల సమయంలో హింసకు సంబంధించిన వీడియోనా? కాదు, ఇది 2023 నాటిది

Fact Check: Putin says Russia is ready for war with Europe? No, here are the facts