ದೇಶದಲ್ಲಿ ದೀಪಾವಳಿ ಸಂಭ್ರಮ ಇನ್ನೂ ನಿಂತಿಲ್ಲ. ಈಗಲೂ ಪಟಾಕಿಗಳ ಸದ್ದು ಕೇಳುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಂತು ಪಟಾಕಿಗಳ ವೀಡಿಯೊಗಳು ಒಂದರ ಹಿಂದೆ ಒಂದರಂತೆ ಅಪ್ಲೋಡ್ ಆಗುತ್ತಿದೆ. ಇವುಗಳ ಮಧ್ಯೆ ಸೌದಿ ಅರೇಬಿಯಾದಲ್ಲಿ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತಿದೆ ಎಂಬುದನ್ನು ತೋರಿಸಲು ವೀಡಿಯೊ ಸದ್ದು ಮಾಡುತ್ತಿದೆ. ಇದರಲ್ಲಿ, ಹಲವಾರು ಪಟಾಕಿಗಳು ಎತ್ತರಕ್ಕೆ ಹಾರಿ ಆಕಾಶದಲ್ಲಿ ಬೆಳಕು ಚೆಲ್ಲುವುದನ್ನು ಕಾಣಬಹುದು. ಜೊತೆಗೆ ಪುರುಷರು ಮತ್ತು ಬುರ್ಖಾ ಧರಿಸಿದ ಮಹಿಳೆಯರು ಇದನ್ನು ವೀಕ್ಷಿಸುತ್ತಿರುವುದು ವೀಡಿಯೊದಲ್ಲಿದೆ.
ಎಕ್ಸ್ ಬಳಕೆದಾರರೊಬ್ಬರು ನವೆಂಬರ್ 1 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಸೌದಿ ಅರೇಬಿಯಾ ಕೂಡ ರಾಮನ ಆಗಮನವನ್ನು ಸಂಭ್ರಮಿಸುತ್ತಿದೆ ಎಂದು ಇಲ್ಲಿನ ಮತಾಂತರಗೊಂಡ ಜನರಿಗೆ ತೋರಿಸಿ. ಜೈ ಶ್ರೀ ರಾಮ್’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊಕ್ಕೆ ‘‘ನಾಗಾಲ್ಯಾಂಡ್ ನಲ್ಲಿ ಹಿಂದೂಗಳು ದೀಪಾವಳಿ ಆಚರಿಸಿದ್ದು ಅಧ್ಭುತ...’’ ಎಂದು ಹೇಳಿಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಸೌದಿ ಅರೇಬಿಯಾದಲ್ಲಿ ನಡೆದ ರಾಷ್ಟ್ರೀಯ ದಿನಾಚರಣೆ ವೇಳೆ ತೆಗೆದ ವೀಡಿಯೊ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ ಲೆನ್ಸ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಈ ವೀಡಿಯೊವನ್ನು ಸೆಪ್ಟೆಂಬರ್ ತಿಂಗಳ ಹಿಂದೆ ಅನೇಕ ಬಳಕೆದಾರರು ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಬಳಕೆದಾರರ ಪ್ರಕಾರ, ಈ ವೀಡಿಯೊ ಸೌದಿ ಅರೇಬಿಯಾದ 94 ನೇ ರಾಷ್ಟ್ರೀಯ ದಿನದಂದು ಆಚರಣೆ ಮಾಡಿದ ಸಿಡಿಮದ್ದಿನ ಪ್ರದರ್ಶನವಾಗಿದೆ.
ಎಜಾಜ್ ಖಾನ್ ಎಂಬ ಬಳಕೆದಾರರು ಈ ವೀಡಿಯೊವನ್ನು ಸೆಪ್ಟೆಂಬರ್ 21, 2024 ರಂದು ಪೋಸ್ಟ್ ಮಾಡಿದ್ದಾರೆ.
ಹಾಗೆಯೆ ಅನೇಕ ಬಳಕೆದಾರರು 22 ಮತ್ತು 23 ಸೆಪ್ಟೆಂಬರ್ 2024 ರಂದು ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಬಳಕೆದಾರರು ಈ ವೀಡಿಯೊವನ್ನು ಸೌದಿ ಅರೇಬಿಯಾ ರಾಷ್ಟ್ರೀಯ ದಿನ ಎಂದೂ ವಿವರಿಸಿದ್ದಾರೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ಮಾಡಿದೆವು. ಆಗ ಸೆಪ್ಟೆಂಬರ್ 23 ರಂದು, ಸೌದಿ ಅರೇಬಿಯಾದ 94 ನೇ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪಟಾಕಿ ಸಿಡಿಸಲಾಯಿತು ಎಂದು ಗಲ್ಫ್ ನ್ಯೂಸ್ ವರದಿ ಮಾಡಿರುವುದು ಸಿಕ್ಕಿತು.
ಸೌತ್ ಚೆಕ್ ಫ್ಯಾಕ್ಟ್ ಚೆಕ್‌ನಿಂದ, ವೈರಲ್ ಪಟಾಕಿಯ ವೀಡಿಯೊ ಸೆಪ್ಟೆಂಬರ್ ತಿಂಗಳದ್ದು ಎಂಬುದು ಸ್ಪಷ್ಟವಾಗಿದೆ. ವೀಡಿಯೊದ ನಿಖರವಾದ ದಿನಾಂಕವನ್ನು ನಾವು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಇದು ಸೌದಿ ಅರೇಬಿಯಾದಲ್ಲಿ ಈ ವರ್ಷದ ದೀಪಾವಳಿ ಆಚರಣೆಗಳಿಗೆ ಸಂಬಂಧಿಸಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.