ಮನೆಯೊಳಗೆ ಒಬ್ಬ ವ್ಯಕ್ತಿ ಮಹಿಳೆಯನ್ನು ಕ್ರೂರವಾಗಿ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಮತ್ತೊಂದು ಮಹಿಳೆ ಕೂಡ ಇದ್ದು ಆಕೆ ಹೊಡೆಯುವುದನ್ನು ತಡೆಯುತ್ತಿರುವುದು ಕಾಣಬಹುದು. ಮಹಿಳೆ ಹಿಂದೂ ಮತ್ತು ಆಕೆಯ ಮೇಲೆ ಹಲ್ಲೆ ನಡೆಸುತ್ತಿರುವ ಪುರುಷ ಆಕೆಯ ಮುಸ್ಲಿಂ ಪತಿ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಅಬ್ದುಲ್ಲನ ಮದುವೆಯಾದ ಹಿಂದೂ ಹುಡುಗಿಯ ಪರಿಸ್ಥಿತಿ. ಹಿಂದೂ ಹುಡುಗರು ಮದುವೆಯಾಗ್ತೀವಿ ಎಂದು ಮುಂದೆ ಹೋದರೆ. ನಿಮಗೆ ಗೋರ್ಮೆಂಟ್ ಜಾಬ್ ಇದೆಯಾ ತಿಂಗಳ ತಿಂಗಳ ಲಕ್ಷ ಲಕ್ಷ ದುಡಿ ಬೇಕು ಸ್ವಂತ ಕಾರ್ ಇರಬೇಕು ಬಂಗಲೆ ಇರಬೇಕು ಅಡಿಕೆ ತೋಟ ಇರಬೇಕು. ಇಷ್ಟೆಲ್ಲಾ ನೇಮಗಳು ಹಾಕ್ತಾರೆ. ಆದರೆ ಅಬ್ದುಲ್ಲ ನನ್ನ ಮದುವೆಯಾಗಿ ಹೋಗಿ ನರಕದಲ್ಲಿ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಕೋನವಿಲ್ಲ. ಈ ವೀಡಿಯೊ ಮುಸ್ಲಿಂ ದಂಪತಿಗಳದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದಾಗ, ಇಂಡಿಯಾ ನ್ಯೂಸ್ ಯುಪಿ/ಯುಕೆ ಜೂನ್ 19, 2025 ರಂದು ಅದೇ ವೈರಲ್ ವೀಡಿಯೊವನ್ನು ವರದಿ ಮಾಡಿದ ಎಕ್ಸ್ ಪೋಸ್ಟ್ ನಮಗೆ ಸಿಕ್ಕಿತು. ಪೋಸ್ಟ್‌ನಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದ್ದು, ವೀಡಿಯೊದಲ್ಲಿ ಕಂಡುಬರುವ ಪುರುಷ ಮತ್ತು ಮಹಿಳೆ ಗಂಡ ಮತ್ತು ಹೆಂಡತಿ ಆಗಿದ್ದಾರೆ.
ಈ ಕುರಿತು ಇನ್ನಷ್ಟು ಹುಡುಕಿದಾಗ, ಹಾಪುರ್ ಪೊಲೀಸರು ಜೂನ್ 26, 2025 ರಂದು ಹಂಚಿಕೊಂಡ X ಪೋಸ್ಟ್ ಕಂಡುಬಂದಿದೆ. ವೈರಲ್ ವೀಡಿಯೊ ಮುಸ್ಲಿಂ ದಂಪತಿಗಳ ನಡುವಿನ ಕೌಟುಂಬಿಕ ಕಲಹವನ್ನು ತೋರಿಸುತ್ತದೆ ಎಂದು ಪೋಸ್ಟ್ ಸ್ಪಷ್ಟಪಡಿಸಿದೆ, ‘‘ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ (X/Twitter, Instagram, ಇತ್ಯಾದಿ) ಹಿಂದೂ-ಮುಸ್ಲಿಂ ಸಮಸ್ಯೆ ಎಂದು ತಪ್ಪಾಗಿ ಚಿತ್ರಿಸಲಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಆಕೆಯ ಪತಿ, ಮತ್ತು ಇಬ್ಬರೂ ಮುಸ್ಲಿಮರು. ಈ ಘಟನೆ ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದಿದ್ದು, ಹಾಪುರ್ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ದಂಪತಿಗಳು ಈಗ ಪರಸ್ಪರ ಒಪ್ಪಿಗೆಯ ಮೂಲಕ ಒಟ್ಟಿಗೆ ವಾಸಿಸುತ್ತಿದ್ದಾರೆ. ಕೋಮು ತಪ್ಪು ಮಾಹಿತಿಯನ್ನು ಹರಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಕಾನೂನು ಕ್ರಮಕ್ಕಾಗಿ ಅಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಇತರರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ’’ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗಾಗಿ ಸೌತ್ ಚೆಕ್ ತನ್ನ ತನಿಖೆಯಲ್ಲಿ ವೈರಲ್ ಆಗುತ್ತಿರುವ ಹೇಳಿಕೆ ನಕಲಿ ಎಂದು ಕಂಡುಕೊಂಡಿದೆ. ಈ ವೀಡಿಯೊದಲ್ಲಿ ಯಾವುದೇ ಹಿಂದೂ-ಮುಸ್ಲಿಂ ಕೋನವಿಲ್ಲ. ಈ ವೀಡಿಯೊ ಮುಸ್ಲಿಂ ದಂಪತಿಗಳ ನಡುವಿನ ಜಗಳದ ವೀಡಿಯೊವಾಗಿದೆ.